ಪ.ಬಂಗಾಳದಲ್ಲಿ ಟಿಎಂಸಿಯಿಂದ ‘ಖೇಲಾ ಹೋಬೆ ದಿವಸ್’ಆಚರಣೆ

ಕೋಲ್ಕತಾ,ಆ.16: ತೃಣಮೂಲ ಕಾಂಗ್ರೆಸ್ ಸೋಮವಾರ ಪಶ್ಚಿಮ ಬಂಗಾಳದಾದ್ಯಂತ ‘ಖೇಲಾ ಹೊಬೆ ದಿವಸ್ ’ಅನ್ನು ಆಚರಿಸಿತು. ಈ ಸಂದರ್ಭ ಪಕ್ಷದ ನಾಯಕರು ರಾಜ್ಯದ ಮೂಲೆಮೂಲೆಗಳಲ್ಲಿಯೂ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದ್ದರು.
ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮತ್ತು 1980ರ ಆ.16ರಂದು ಕೋಲ್ಕತಾದಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಸಂಭವಿಸಿದ್ದ ನೂಕುನುಗ್ಗಲಿನಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದ 16 ಜನರಿಗೆ ಗೌರವಾರ್ಪಣೆಯ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆ.16ರನ್ನು ‘ಖೇಲಾ ಹೋಬೆ ದಿವಸ್ ’ವನ್ನಾಗಿ ಆಚರಿಸಲಾಗುವುದು ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಳೆದ ತಿಂಗಳು ಪ್ರಕಟಿಸಿದ್ದರು.
ಈ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ತೀವ್ರ ಹಣಾಹಣಿಯೊಂದಿಗೆ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭ ‘ಖೇಲಾ ಹೋಬೆ (ಆಟ ನಡೆಯುತ್ತದೆ)’ ಟಿಎಂಸಿಯ ರಣಘೋಷವಾಗಿತ್ತು. ಚುನಾವಣೆೆಯಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸಿ ಸತತ ಮೂರನೇ ಅವಧಿಗೆ ಅಧಿಕಾರದ ಗದ್ದುಗೆಯನ್ನೇರಿತ್ತು.
ʼ
ಈ ನಡುವೆ ‘ಖೇಲಾ ಹೋಬೆ ದಿವಸ್’ಆಚರಣೆಯನ್ನು ವಿರೋಧಿಸಿರುವ ಬಿಜೆಪಿ ಮುಸ್ಲಿಂ ಲೀಗ್ 1946 ಆ.16ರಂದು ತನ್ನ ‘ನೇರ ಕ್ರಮ ದಿನ’ವಾಗಿ ಘೋಷಿಸಿತ್ತು ಮತ್ತು ಇದು ‘ಗ್ರೇಟ್ ಕಲಕತ್ತಾ ಕಿಲ್ಲಿಂಗ್ಸ್ ’ಎಂದೇ ಕುಖ್ಯಾತಿ ಪಡೆದಿರುವ ಕೋಲ್ಕತಾದಲ್ಲಿ ಹಿಂದು ಮತ್ತು ಮುಸ್ಲಿಮರ ನಡುವೆ ವ್ಯಾಪಕ ಹಿಂಸಾಚಾರಕ್ಕೆ ನಾಂದಿ ಹಾಡಿತ್ತು ಎಂದು ಹೇಳಿದೆ. ಅದು ಸೋಮವಾರವನ್ನು ‘ಪಶ್ಚಿಮ ಬಂಗಾಳವನ್ನು ಉಳಿಸಿ ’ದಿನವನ್ನಾಗಿ ಆಚರಿಸಿದೆ.







