ಕಿನ್ನೌರ್ ಭೂಕುಸಿತ: ಸಾವಿನ ಸಂಖ್ಯೆ 25ಕ್ಕೆ ಏರಿಕೆ
ಶಿಮ್ಲಾ,ಆ.16: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಕಳೆದ ಬುಧವಾರ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಸೋಮವಾರ ಇನ್ನೂ ಎರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೇರಿದೆ. ಶನಿವಾರದವರೆಗೆ 23 ಶವಗಳು ಪತ್ತೆಯಾಗಿದ್ದವು. ಸೋಮವಾರ ಅವಶೇಷಗಳಡಿ ಇನ್ನೂ ಎರಡು ಶವಗಳು ಪತ್ತೆಯಾಗಿವೆ. ಕನಿಷ್ಠ ನಾಲ್ವರು ಈಗಲೂ ನಾಪತ್ತೆಯಾಗಿದ್ದು,ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಐಟಿಬಿಪಿ ವಕ್ತಾರ ವಿವೇಕ ಪಾಂಡೆ ತಿಳಿಸಿದರು.
ಐಟಿಬಿಪಿ,ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಮೇಲಿನಿಂದ ಬೀಳುತ್ತಿರುವ ಬಂಡೆಗಳು ಕಾರ್ಯಾಚರಣೆಗೆ ತೊಡಕನ್ನುಂಟು ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ.11ರಂದು ಅಪರಾಹ್ನ 12:45ರ ಸುಮಾರಿಗೆ ಪರ್ವತದಿಂದ ಭಾರೀ ಗಾತ್ರದ ಬಂಡೆಗಲ್ಲುಗಳು ಕಿನ್ನೌರ್-ಶಿಮ್ಲಾ ನಡುವಿನ ರಾ.ಹೆ.5ರಲ್ಲಿ ಉರುಳಿ ಬೀಳುತ್ತಿದ್ದುದ್ದನ್ನು ಪ್ರತ್ಯಕ್ಷದರ್ಶಿಗಳು ಸ್ಮರಿಸಿಕೊಂಡಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ ಮಹಿಂದರ್ ಪಾಲ್ ಮತ್ತು ನಿರ್ವಾಹಕ ಗುಲಾಬ್ ಸಿಂಗ್ ಸೇರಿದಂತೆ ಕನಿಷ್ಠ 13 ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಬುಧವಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂದರ್ಭ ಟ್ಯಾಕ್ಸಿಯೊಂದರಲ್ಲಿ ಎಂಟು ಶವಗಳು ಪತ್ತೆಯಾಗಿದ್ದವು. ಅವಶೇಷಗಳಡಿಯಿಂದ ಹಾನಿಗೀಡಾಗಿದ್ದ ಎರಡು ಕಾರುಗಳನ್ನು ಹೊರತೆಗೆಯಲಾಗಿತ್ತಾದರೂ ಅವುಗಳಲ್ಲಿ ಯಾರೂ ಇರಲಿಲ್ಲ. ಗುರುವಾರ ನಾಲ್ಕು ಮತ್ತು ಶುಕ್ರವಾರ ಮೂರು ಶವಗಳು ಪತ್ತೆಯಾಗಿದ್ದವು. ಶನಿವಾರ ಅವಶೇಷಗಳಡಿಯಿಂದ ಇನ್ನೂ ಆರು ಶವಗಳನ್ನು ಹೊರತೆಗೆಯಲಾಗಿತ್ತು.







