ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ: ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ. ಇಸ್ರೇಲಿ ಸ್ಪೈವೇರ್ ಅನ್ನು ಪ್ರತ್ಯೇಕ ಫೋನ್ ಗಳಲ್ಲಿ ಬಳಸಲಾಗಿದೆ ಎಂಬ ಆರೋಪಗಳಿಗೆ ಸರಕಾರ ಉತ್ತರಿಸಬೇಕು ಎಂದು ಹೇಳಿದೆ. ಕೇಂದ್ರದ ಪ್ರತಿಕ್ರಿಯೆಯನ್ನು ಪಡೆದ ನಂತರವೇ ಆರೋಪಗಳ ತನಿಖೆಗೆ ಸಮಿತಿಯನ್ನು ರಚಿಸುವುದನ್ನು ನಿರ್ಧರಿಸಲಾಗುತ್ತದೆ ಎಂದೂ ನ್ಯಾಯಾಲಯ ಹೇಳಿದೆ.
"ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಆದರೆ ಅರ್ಜಿದಾರರ ಆರೋಪದ ಪ್ರಕಾರ ವ್ಯಕ್ತಿಗಳ ಫೋನ್‌ಗಳ ಮೇಲೆ ದಾಳಿ ಮಾಡಲಾಗಿದೆ. ಸಮರ್ಥ ಪ್ರಾಧಿಕಾರ ಮಾತ್ರ ಅದಕ್ಕೆ ಪ್ರತಿಕ್ರಿಯಿಸಬಹುದು" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
"ನ್ಯಾಯಾಲಯದಿಂದ ಮುಚ್ಚಿಡಲು ಏನೂ ಇಲ್ಲ" ಎಂದು ಕೇಂದ್ರ ಸರಕಾರವು ಹೇಳಿದೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಪತ್ರಕರ್ತರಾದ ಎನ್. ರಾಮ್ ಹಾಗೂ ಶಶಿಕುಮಾರ್ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಕಪಿಲ್ ಸಿಬಲ್, "ನಾವು ಕೂಡ ರಾಷ್ಟ್ರೀಯ ಭದ್ರತೆ ರಾಜಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ, ಸರಕಾರವು ಪೆಗಾಸಸ್ ಗೂಢಚರ್ಯೆ ಬಳಸಿದೆಯೋ ಇಲ್ಲವೋ ಎಂದು ಉತ್ತರಿಸಬೇಕೆಂದು ಬಯಸುತ್ತೇವೆ" ಎಂದು ಹೇಳಿದರು.
10 ದಿನಗಳ ನಂತರ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.







