ಅಫ್ಘಾನಿಸ್ತಾನದಿಂದ ಸೇನಾಪಡೆಗಳ ಹಿಂಪಡೆಯುವಿಕೆ ಕುರಿತ ನಿರ್ಧಾರಕ್ಕೆ ವಿಷಾದವಿಲ್ಲ ಎಂದ ಬೈಡನ್

ವಾಷಿಂಗ್ಟನ್: ಅಫ್ಗಾನಿಸ್ತಾನದಿಂದ ಅಮೆರಿಕಾ ತನ್ನ ಸೇನಾ ಪಡೆಗಳನ್ನು ವಾಪಸ್ ಪಡೆಯುವ ತಮ್ಮ ನಿರ್ಧಾರದ ಕುರಿತಂತೆ ತಾವು ಅಚಲರಾಗಿರುವುದಾಗಿ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿದ ಬೆನ್ನಲ್ಲೇ ಬೈಡನ್ ಅವರ ಪ್ರತಿಕ್ರಿಯೆ ಬಂದಿದೆ.
"ಅಲ್ಲಿಂದ ಸೇನಾ ಪಡೆಗಳನ್ನು ಈ ವರ್ಷ ವಾಪಸ್ ಪಡೆಯುವ ಕುರಿತು ಈ ಹಿಂದಿನ ಒಪ್ಪಂದಕ್ಕೆ ಅಂಟಿಕೊಳ್ಳುವುದು ಅಥವಾ ಅಲ್ಲಿಗೆ ಇನ್ನೂ ಸಾವಿರಾರು ಸೇನಾ ಪಡೆಗಳನ್ನು ಯುದ್ಧದ ಮೂರನೇ ದಶಕಕ್ಕಾಗಿ ಕಳುಹಿಸುವುದರ ನಡುವೆ ನಾನು ಒಂದು ನಿರ್ಧಾರ ಕೈಗೊಳ್ಳಬೇಕಿತ್ತು" ಎಂದು ಬೈಡೆನ್ ಹೇಳಿದ್ದಾರೆ.
ತಾವು ಹಿಂದಿನ ತಪ್ಪುಗಳನ್ನು ಮಾಡುವುದಿಲ್ಲ ಹಾವೂ ಅಫ್ಗಾನಿಸ್ತಾನದಿಂದ ಸೇನಾಪಡೆಗಳ ವಾಪಸಾತಿ ನಿರ್ಧಾರಕ್ಕೆ ವಿಷಾದಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
"ನನ್ನ ನಿರ್ಧಾರದ ಹಿಂದೆ ಅಚಲನಾಗಿದ್ದೇನೆ. ಅಮೆರಿಕಾದ ಪಡೆಗಳನ್ನು ವಾಪಸ್ ಪಡೆಯಲು ಯಾವತ್ತೂ ಸೂಕ್ತ ಸಮಯವಿರಲಿಲ್ಲ, ನನ್ನ ನಿರ್ಧಾರದ ಪರಿಣಾಮಗಳ ಕುರಿತಂತೆ ಟೀಕೆಗಳನ್ನು ಸ್ವೀಕರಿಸಲು ಸಿದ್ಧವಿದ್ದೇನೆ" ಎಂದು ಅವರು ಹೇಳಿದರಲ್ಲದೆ ಇಂತಹ ನಿರ್ಧಾರವನ್ನು ಮುಂದಿನ ಅಧ್ಯಕ್ಷರಿಗೆ ವಹಿಸುವುದು ಬೇಕಿಲ್ಲ ಎಂದಿದ್ದಾರೆ.
ಅಫ್ಗಾನಿಸ್ತಾನದಿಂದ ತೆರಳುವುದು ಅಮೆರಿಕಾಗೆ ಸರಿಯಾದ ಕ್ರಮವಾಗಿತ್ತು ಹಾಗೂ ಅಲ್ಲಿರುವುದು ಅಮೆರಿಕಾದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗೂ ಸೂಕ್ತವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ತಾಲಿಬಾನಿಗಳು ಅಫ್ಗಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಅಲ್ಲಿನ ವಿಮಾನ ನಿಲ್ದಾಣದಲ್ಲಿನ ಗೊಂದಲಮಯ ಪರಿಸ್ಥಿತಿ ಹಾಗೂ ನೂಕುನುಗ್ಗಲಿನ ವಿಚಾರ ಹೃದಯವಿದ್ರಾವಕ ಎಂದು ಅವರು ಹೇಳಿದ್ದಾರೆ.







