ಕೆಮ್ಮಣ್ಣು: ಎರೆಹುಳ ತೊಟ್ಟಿ ನಿರ್ಮಾಣ ಕಾರ್ಯಕ್ಕೆ ಚಾಲನೆ

ಉಡುಪಿ, ಆ.17: ತೋನ್ಸೆ ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಪಡುಕುದ್ರುವಿನ ವಿಕ್ಟರ್ ಸಂತೋಷ್ ಅಂದ್ರಾದೆಯವರ ಮನೆ ಬಳಿ ರೈತಬಂಧು ಯೋಜನೆಯ ಅಭಿಯಾನದಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಎರೆಹುಳ ತೊಟ್ಟಿ ನಿರ್ಮಾಣ ಕಾರ್ಯಕ್ಕೆ ರವಿವಾರ ಚಾಲನೆ ನೀಡಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿಪಂ ಯೋಜನಾ ನಿರ್ದೇಶಕ ಬಾಬು ಮಾತನಾಡಿ, ಸರಕಾರ ಪರಿಸರಕ್ಕೆ ಪೂರಕ ಸಹಜ ಕೃಷಿಯನ್ನು ಉತ್ತೇಜಿ ಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 25 ಎರೆಹುಳ ಗೊಬ್ಬರದ ತೊಟ್ಟಿ ನಿರ್ಮಾಣದ ಗುರಿ ಹೊಂದಲಾಗಿದೆ. ಅದರಂತೆ ಉಡುಪಿ ತಾಲೂಕಿನಲ್ಲಿ ಪ್ರಥಮ ತೊಟ್ಟಿಗೆ ಇಲ್ಲಿ ಚಾಲನೆ ನೀಡಲಾಗಿದೆ. ಇನ್ನುಳಿದವರೂ ಇದೇ ಮಾದರಿಯಲ್ಲಿ ಇದನ್ನು ಮಾಡಿಕೊಂಡಲ್ಲಿ ಸುಸ್ಥಿರ ಮತ್ತು ಸಹಜ ಕೃಷಿಗೆ ಉತ್ತೇಜನ ನೀಡಿದಂತಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನರಾಜ್, ಉಡುಪಿ ತಾಪಂನ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ವಿಜಯಾ, ಕಿರಿಯ ಇಂಜಿನಿಯರ್ ಓಂಪ್ರಕಾಶ್, ಗ್ರಾಪಂ ಅಧ್ಯಕ್ಷೆ ಲತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ, ಸದಸ್ಯರುಗಳಾದ ವಿಜಯ್, ಮಹಮ್ಮದ್ ಇದ್ರೀಸ್, ಹೈದರ್ ಅಲಿ, ಯೋಜನೆಯ ಫಲಾನುಭವಿಗಳಾದ ವಿಕ್ಟರ್ ಸಂತೋಷ್ ಅಂದ್ರಾದೆ, ಜೇಮ್ಸ್ ಅಂದ್ರಾದೆ, ಬೆನಡಿಕ್ಟ್ ಜಾರ್ಜ್ ಅಂದ್ರಾದೆ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ದಿನಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







