ಪುದು ಗ್ರಾಮದಲ್ಲಿ ಆರೋಗ್ಯ, ಶಿಕ್ಷಣ ಸಂಸ್ಥೆಗಳು ಮೇಲ್ದರ್ಜೆಗೆ: ಶಾಸಕ ಯು.ಟಿ.ಖಾದರ್
ಮಾರಿಪಳ್ಳ ಸುಜೀರ್ ಸರಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ, ಆ.17: ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪುದು ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸವಲತ್ತು ಮತ್ತು ಶಿಕ್ಷಣ ಈ ಗ್ರಾಮ ದಲ್ಲೇ ದೊರೆಯುವಂತಾಗಲು ಇಲ್ಲಿನ ಶಾಲೆಗಳು ಹಾಗೂ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಪುದು ಗ್ರಾಮದ ಸುಜೀರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಜನರ ಬೇಡಿಕೆಯಂತೆ ಸುಸಜ್ಜಿತ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳ ಕಲಿಕೆಗೆ ಇನ್ನಷ್ಟು ಅನುಕೂಲ ಆಗಲಿದೆ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುವಂತಾಗಲು ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಭ್ಯ ಇರುವ ಇನ್ನಷ್ಟು ಹೆಚ್ಚಿನ ಅನುದಾನಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಸುಜೀರ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಮಾದರಿ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಇದಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಆಸ್ಪತ್ರೆಯ ಕಾಮಗಾರಿ ಪುರ್ಣಗೊಂಡ ಬಳಿಕ ಪುದು, ತುಂಬೆ, ಮೇರಮಜಲು, ಕೊಡ್ಮಾಣ್ ಗ್ರಾಮದ ಜನರಿಗೆ ಮಂಗಳೂರಿನಲ್ಲಿ ಸಿಗುವ ಆರೋಗ್ಯ ಸವಲತ್ತು ಇಲ್ಲಿಯೇ ಸಿಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ, ಖಾಸಗಿ ಶಾಲೆಗಳಲ್ಲಿರುವ ಶಿಕ್ಷಕರಿಗಿಂತ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕ ವರ್ಗ ಇರುತ್ತದೆ. ಖಾಸಗಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ. ಹೀಗಾಗಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸುತ್ತಿರುವ ಟುಡೇ ಫೌಂಡೇಶನ್ ಮತ್ತು ಈ ಊರಿನ ಜನರು, ದಾನಿಗಳು ಹಾಗೂ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ನಮ್ಮ ಊರಿನಲ್ಲಿರುವ ಶಾಲಾ ಕಾಲೇಜುಗಳು ನಮ್ಮ ಊರಿನ ಅಮೂಲ್ಯವಾದ ಸಂಪತ್ತು ಆಗಿರುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಶಾಲಾ ಕಾಲೇಜುಗಳು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಮ್ಮ ಪರಿಸರದಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಪವಿತ್ರ್ಯತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ನೂತನ ಕಟ್ಟಡಕ್ಕೆ ಅನುದಾನ ಒದಗಿಸಿದ ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ದಾನಿ ಪ್ರಕಾಶ್ ಚಂದ್ರ ರೈ ದೇವಸ್ಯ ಅವರನ್ನು ಸನ್ಮಾನಿಸಲಾಯಿತು.
ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ಸಿಆರ್‌ಪಿ ರೋಹಿಣಿ, ಉದ್ಯಮಿಗಳಾದ ಇಸಾಕ್, ಯೂಸೂಫ್ ಅಲಂಕಾರು, ಅಕ್ರಂ ಬಶೀರ್, ಮನಪಾ ಸದಸ್ಯ ಅಬ್ದುಲ್ ಲತೀಫ್, ಅಬೂಬಕ್ಕರ್ ಫರಂಗಿಪೇಟೆ, ಮಜೀದ್ ಫರಂಗಿಪೇಟೆ, ರಫೀಕ್ ಪೇರಿಮಾರ್, ಇಮ್ತಿಯಾಝ್ ತುಂಬೆ, ಮುಹಮ್ಮದ್ ಮೋನು, ಸಲಾಂ ಮಲ್ಲಿ, ಇಶಾಂ ಫರಂಗಿಪೇಟೆ, ಇಕ್ಬಾಲ್ ಸುಜೀರ್, ಝಾಹಿರ್ ಕುಂಪನಮಜಲು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ., ಮೌಲನಾ ಆಝಾದ್ ಶಾಲೆಯ ಮುಖ್ಯ ಶಿಕ್ಷಕ ಉಮರಬ್ಬ, ತಾ.ಪಂ. ಮಾಜಿ ಅಧ್ಯಕ್ಷ ಆಸಿಫ್ ಇಕ್ಬಾಲ್, ಗ್ರಾ.ಪಂ. ಸದಸ್ಯರಾದ ಭಾಸ್ಕರ್ ರೈ, ಕಿಶೋರ್ ಸುಜೀರ್, ಲವೀನಾ, ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ರವಿ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಹುಸೈನ್ ಸ್ವಾಗತಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಲಾಂ ಧನ್ಯವಾದಗೈದರು. ನಿವೃತ್ತ ಶಿಕ್ಷಕ ಮುಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.








.jpeg)




