'ಸಾವರ್ಕರ್ ವಿಚಾರ' ಮುಂಬರುವ ಚುನಾವಣೆಯಲ್ಲಿ ಹಿಂದೂ ಓಟಿಗಾಗಿ ಬಿಜೆಪಿಯ ಡೊಂಬರಾಟ : ಹಿಂದೂ ಮಹಾಸಭಾ

ಪುತ್ತೂರು: ವಿನಾಯಕ ದಾಮೋದರ ಸಾವರ್ಕರ್ ಅವರು ಹಿಂದೂ ಮಹಾಸಭಾ ನಾಯಕರಾಗಿದ್ದು, ಅವರು ಜನಸಂಘವನ್ನು ವಿರೋಧಿಸಿ ಹೊರ ಬಂದವರು. ಇದೀಗ ಬಿಜೆಪಿಗರು ಮುಂಬರುವ ಚುನಾವಣೆಯಲ್ಲಿ ಗೆಲುವು ಪಡೆಯಲು ಸಾವರ್ಕರ್ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಹೊರತು ಸಾವರ್ಕರ್ ಮೇಲಿನ ಪ್ರೀತಿಯಿಂದಲ್ಲ. ಬಿಜೆಪಿ ಚುನಾವಣಾ ಗೆಲುವಿಗಾಗಿ ಪ್ರತಿಭಟನೆಯ ಡೊಂಬರಾಟ ನಡೆಸುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮತ್ತು ಎಸ್‍ಡಿಪಿಐ ಒಳ ಒಪ್ಪಂದ ಮಾಡಿಕೊಂಡು ಕಬಕದಲ್ಲಿ ಸಾವರ್ಕರ್ ಭಾವ ಚಿತ್ರ ತೆಗೆಯಬೇಕು ಎಂದು ಒತ್ತಾಯಿಸಿ, ಸಾವರ್ಕರ್ ಹೆಸರಿನಲ್ಲಿ ಗಲಭೆ ಎಬ್ಬಿಸಿ ಜನರನ್ನು ಒಡೆದು ಆಳುವ ನೀತಿ ಅನುಸರಿಸಲು ಮುಂದಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಗೆಲುವು ಪಡೆಯಲು ಈ ನಾಟವಾಡುತ್ತಿದೆ. ಈ ಹಿಂದೆ ಬಿಜೆಪಿಯು ಎಸ್‍ಡಿಪಿಐ ಅವರೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿದೆ. ಪ್ರಜ್ಞಾವಂತ ಮತದಾರರಿಗೆ ಈ ಬಗ್ಗೆ ಸ್ಪಷ್ಟವಾದ ಅರಿವಿದೆ. ಅವರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ಈಗ ಚುನಾವಣೆ ನಡೆದಲ್ಲಿ ಬಿಜೆಪಿ 10 ಸ್ಥಾನವನ್ನೂ ಪಡೆಯಲು ಸಾಧ್ಯವಿಲ್ಲ. ಎಸ್‍ಡಿಪಿಐ ಸೃಷ್ಠಿಗೆ ಮೂಲ ಕಾರಣಕರ್ತರು ಬಿಜೆಪಿಗರೇ ಎಂದ ಅವರು ಅಧಿಕಾರ ಇಲ್ಲದ ಸಂದರ್ಭದಲ್ಲಿ ಎಸ್‍ಡಿಪಿಐ, ಪಿಎಫ್‍ಐಯನ್ನು ನಿಷೇಧಿಸುವಂತೆ ಆಗ್ರಹಿಸುತ್ತಿದ್ದ ಬಿಜೆಪಿ ಇದೀಗ ಎಲ್ಲೆಡೆ ಅಧಿಕಾರದಲ್ಲಿದೆ. ಅವರಿಗೆ ತಾಖತ್ತಿದ್ದಲ್ಲಿ ನಿಷೇಧ ಮಾಡಲಿ ಎಂದು ಒತ್ತಾಯಿಸಿದರು.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಮೇಂದ್ರ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಸಭಾ ದ.ಕ. ಜಿಲ್ಲಾ ಉಸ್ತುವಾರಿ ಪ್ರೇಮ್ ಪೊಳಲಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನ್ಯಕುಮಾರ್ ಬೆಳಂದೂರು, ದ.ಕ. ಜಿಲ್ಲಾ ಹಿಂದೂ ಯುವಕಸಭಾ ಅಧ್ಯಕ್ಷ ರಾಜೇಶ್ ಪ್ರಸಾದ್, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನವೀನ್ ಕುಲಾಲ್ ಉಪಸ್ಥಿತರಿದ್ದರು.





