ಸರಕಾರಿ ಕಾರು ಬಿಟ್ಟು ಖಾಸಗಿ ವಾಹನ ಬಳಸುತ್ತಿರುವ ಸಚಿವ ಆನಂದ್ ಸಿಂಗ್

ಬೆಂಗಳೂರು, ಆ.17: ನಿರೀಕ್ಷಿತ ಖಾತೆ ಸಿಗದೆ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಅವರು ಸರಕಾರಿ ಕಾರು ತೊರೆದು ಖಾಸಗಿ ವಾಹನ ಬಳಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಎಸ್ಕಾರ್ಟ್ ಇಲ್ಲದೆ ಅವರು ಓಡಾಡುತ್ತಿದ್ದಾರೆ. ಈ ಮುಖೇನ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಅವರು ಮುನಿಸು ಮುಂದುವರಿಸಿದ್ದಾರೆ.
ಹೀಗಾಗಿ, ಅವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಹುಟ್ಟಿಸಿದ್ದು, ಆ.18ರಂದು ಬೆಂಗಳೂರಿಗೆ ಹಿಂತಿರುಗಿದ ನಂತರ ತಮ್ಮ ನಿಲುವು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೆ, ಸಚಿವ ಆನಂದ್ ಸಿಂಗ್ ಓಡಾಟ ಮಂಗಳವಾರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದ ವೇಳೆ ಗೈರು ಹಾಜರಾಗಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾರಜೋಳ ಅವರು ಆಗಮಿಸುತ್ತಿದ್ದಂತೆ ಆನಂದ್ ಸಿಂಗ್ ಭಾಗಿಯಾಗದೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ತೆರಳಿದರು. ಯಲ್ಲಾಪುರದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ರಥ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರ ವೀಕ್ಷಣೆಗೆ ತೆರಳಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.





