ಅಫ್ಘಾನಿಸ್ತಾನ ಬಿಕ್ಕಟ್ಟು:ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಬಿಕ್ಕಟ್ಟುಪೀಡಿತ ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಸಂಜೆ ಭದ್ರತಾ ಸಂಪುಟ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು.
ಭಾರತವು ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಿಂದ ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ. ಭದ್ರತಾ ಕರ್ತವ್ಯದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸೇರಿದಂತೆ ರಾಯಭಾರ ಸಿಬ್ಬಂದಿಯನ್ನು ಎರಡು ವಾಯುಪಡೆಯ ವಿಮಾನಗಳಲ್ಲಿ ಕರೆ ತರಲಾಗಿದೆ. ಎರಡನೆ ವಿಮಾನವು ಇಂದು ಬೆಳಿಗ್ಗೆ ಹೊರಟಿದೆ ಎಂದು ಮೂಲಗಳು ತಿಳಿಸಿವೆ.
ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ನಿನ್ನೆ ತಡರಾತ್ರಿಯವರೆಗೂ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದರು. ಗುಜರಾತ್ ನ ಜಾಮ್‌ನಗರಕ್ಕೆ ಇಂದು ಹಿಂದಿರುಗಿದ ಎಲ್ಲರಿಗೂ ಆಹಾರವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಬೇಕೆಂದು ಅವರು ಸೂಚನೆ ನೀಡಿದರು.





