ಮೀನುಗಾರರಿಗೆ ಡಿಬಿಟಿ ನೇರ ನಗದು ವರ್ಗಾವಣೆ: ಆಧಾರ್ ಸೀಡಿಂಗ್ ಕಡ್ಡಾಯ
ಉಡುಪಿ, ಆ.17: ಪ್ರಸಕ್ತ ಸಾಲಿನಿಂದ ಮೀನುಗಾರಿಕಾ ಇಲಾಖೆಯಲ್ಲಿ ಕೆಲವು ಯೋಜನೆಗಳ ಸಹಾಯಧನವನ್ನು -ಡಿಬಿಟಿ- ನೇರ ನಗದು ವರ್ಗಾವಣೆ ಮೂಲಕ ಸಂಬಂಧಿಸಿದ ಫಲಾನುಭವಿಗಳಿಗೆ ಪಾವತಿಸಲು ಕ್ರಮ ಜರುಗಿಸಲಾಗುತ್ತಿದೆ. ಇದಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಯ ಆಧಾರ್ ಸೀಡಿಂಗ್ ಆಗದೇ ಇರುವ ಕಾರಣದಿಂದ ಹಣ ಪಾವತಿ ಆಗದೇ ವಿಳಂಬ ವಾಗುತ್ತಿರುವುದನ್ನು ಈಗಾಗಲೇ ದೋಣಿ ಮಾಲಕರ ಗಮನಕ್ಕೆ ತರಲಾಗಿದೆ.
ತ್ವರಿತವಾಗಿ ಹಣ ಪಾವತಿಸುವಲ್ಲಿ ಅನುಕೂಲವಾಗಲು ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆ, ಡೀಸಿಲ್ ಮಾರಾಟಕರ ಮರು ಪಾವತಿ ಯೋಜನೆ ಹಾಗೂ ಕೋವಿಡ್-19 ಪ್ಯಾಕೇಜ್-2 ಪರಿಹಾರದ ಫಲಾನುಭವಿ ಗಳು ತಮ್ಮ ವ್ಯವಹಾರ ಇರುವ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವುದರೊಂದಿಗೆ ನೇರ ನಗದು ವರ್ಗಾವಣೆ ಆ್ಯಪ್ (ಡಿಬಿಟಿ ಆ್ಯಪ್) ಮೂಲಕ ಪರಿಶೀಲಿಸಿಕೊಳ್ಳುವಂತೆ ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ:0820-2537044ನ್ನು ಸಂಪರ್ಕಿಸುವಂತೆ ಜಿಲ್ಲಾ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





