'ನೃಪತುಂಗ ಪ್ರಶಸ್ತಿ' ಗೆ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಆಯ್ಕೆ
'ಮಯೂರವರ್ಮ ಪ್ರಶಸ್ತಿ' ಗೆ ಕಾತ್ಯಾಯಿನಿ ಕುಂಜಿಬೆಟ್ಟು ಸೇರಿ ಐವರು ಆಯ್ಕೆ

ಬೆಂಗಳೂರು, ಆ.17: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ 2021ನೇ ಸಾಲಿನ ಬೆಂಮಸಾ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಯುವ ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಸೇರಿ ಐವರನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯು ಪ್ರಶಸ್ತಿಗೆ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಪ್ರಶಸ್ತಿಯು ಏಳು ಲಕ್ಷದ ಒಂದು ರೂಪಾಯಿ ನಗದು, ಫಲಕ, ಪ್ರಶಸ್ತಿಪತ್ರ ಒಳಗೊಂಡಿರುತ್ತದೆ.
ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಖ್ಯಾತ ವಿಮರ್ಶಕ ಡಾ.ಎಸ್.ಆರ್.ವಿಜಯಶಂಕರ, ಸಾಹಿತಿಗಳಾದ ಡಾ.ಸರಜೂ ಕಾಟ್ಕರ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಮುಹಮ್ಮದ್ ಹಫೀಜುಲ್ಲಾ, ಉಪ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಮಥುರಾ ರಾಡ್ರಿಕ್ಸ್, ಕರಾರಸಾ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಉಪಸ್ಥಿತರಿದ್ದರೆಂದು ಕಸಾಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
`ಮಯೂರವರ್ಮ ಸಾಹಿತ್ಯ ಪ್ರಶಸ್ತಿ'
ನೃಪತುಂಗ ಸಾಹಿತ್ಯ ಪ್ರಶಸ್ತಿಯ ಜೊತೆಗೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ 45 ವರ್ಷದೊಳಗಿನ ಯುವ ಸಾಹಿತಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರವರ್ಮ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮೇಲ್ಕಂಡ ಆಯ್ಕೆ ಸಮಿತಿಯು ಯುವ ಸಾಹಿತಿಗಳಾದ ಟಿ.ಜಿ.ಶ್ರೀನಿಧಿ, ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು, ಬಸವರಾಜ ಭಜಂತ್ರಿ ಹಾಗೂ ಜಗದೀಶ ಲಿಂಗನಾಯಕ ಅವರನ್ನು ಸರ್ವಾನುಮತದಿಂದ 2021ನೆಯ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕ, ಪ್ರಶಸ್ತಿಪತ್ರ ಒಳಗೊಂಡಿದೆ.







