ಹನಿಟ್ರ್ಯಾಪ್ ಪ್ರಕರಣ: 13 ಆರೋಪಿಗಳು ಸೇರಿ 3 ಕಾರು, ದ್ವಿಚಕ್ರ ವಾಹನ, ನಗದು ವಶಕ್ಕೆ

ಚಿಕ್ಕಮಗಳೂರು, ಆ.17: ಹನಿ ಟ್ರ್ಯಾಪ್ ಪ್ರಕರಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪ ಹೊರಿಸಿ ಬಲವಂತವಾಗಿ ವಿಡಿಯೋ ಚಿತ್ರೀಕರಿಸಿದ್ದಲ್ಲದೇ ಪೊಲೀಸರ ವೇಷದಲ್ಲಿ ಬಂದು ಪ್ರಕರಣ ದಾಖಲಿಸುವುದಾಗಿ ಹಣ ಸುಲಿಗೆ ಮಾಡಿದ 13 ಜನರನ್ನು ಇಲ್ಲಿನ ನಗರ ಠಾಣೆಯ ಪೊಲೀಸರು ಬಂದಿಸಿದ್ದಾರೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರಿಗೆ ಪರಿಚಿತ ಮಹಿಳೆ ದೂರುವಾಣಿ ಕರೆ ಮಾಡಿ ಆಸ್ಪತ್ರೆಗೆ ತುರ್ತಾಗಿ ತೆರಳಲು 10 ಸಾವಿರ ರೂ. ಹಣ ಕೇಳಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ವ್ಯಕ್ತಿ ಮಹಿಳೆ ಹೇಳಿದ ಮನೆಗೆ ಹೋಗಿ ಹಣ ನೀಡಲು ಹೋಗಿದ್ದಾರೆ. ಆ ವ್ಯಕ್ತಿ ಸ್ನೇಹಿತರ ಜೊತೆ ಮಹಿಳೆ ಹೇಳಿದ ಮನೆಗೆ ತೆರಳಿ ಅಲ್ಲಿದ್ದವರೊಂದಿಗೆ ಮಾತನಾಡುತ್ತಿದ್ದ ವೇಳೆ 5 ಜನ ಬಂದು ಬೆದರಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ನಾವು ಪೊಲೀಸರು ಎಂದು ಹೇಳಿ, ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ 75 ಸಾವಿರ ರೂ. ಹಣ ಕಿತ್ತುಕೊಂಡಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದಿದ್ದ ಐವರು ತಾವು ಪೊಲೀಸರು ಎಂದು ಹೇಳಿ ವ್ಯಕ್ತಿ ಹಾಗೂ ಅವರೊಂದಿಗೆ ಹೋಗಿದ್ದ ಮತ್ತೊರ್ವನ ತಮ್ಮ ಬಟ್ಟೆಯನ್ನು ಬಿಚ್ಚಿಸಿ ಅಲ್ಲಿದ್ದ ಇಬ್ಬರು ಮಹಿಳೆಯರ ಜೊತೆ ಬಲವಂತವಾಗಿ ಬೆತ್ತಲೆಯಾಗಿ ಮಲಗಿಸಿದ್ದಾರೆ. ಬಳಿಕ ವಿಡಿಯೋ ಚಿತ್ರೀಕರಿಸಿದ್ದಾರೆ. ತಾವು ಪೊಲೀಸರು, ಪ್ರಕರಣ ಮುಚ್ಚಿ ಹಾಕುತ್ತೇವೆ ಎಂದು ಹೇಳಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ 2 ಲಕ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಆರೋಪಿಗಳ ಕಾರಿನಲ್ಲಿ ಎಟಿಎಮ್ ಬಳಿಗೆ ಬಂದ ವ್ಯಕ್ತಿ 25 ಸಾವಿರ ರೂ. ಅನ್ನು ಡ್ರಾ ಮಾಡಿ ಆರೋಪಿಗಳಿಗೆ ನೀಡಿದ್ದಾರೆ. ಆಗ ನಕಲಿ ಪೊಲೀಸರ ವೇಷದಲ್ಲಿದ್ದವರು ಬಾಕಿ ಹಣವನ್ನು ಸಂಜೆ ಒಳಗೆ ನೀಡುವಂತೆ ಷರತ್ತು ಹಾಕಿದ್ದಾರೆ. ಈ ವೇಳೆ ವಂಚನೆಗೊಳಗಾದ ವ್ಯಕ್ತಿಗೆ ಇದು ಹನಿಟ್ರ್ಯಾಪ್ ಎಂದು ತಿಳಿದಿದ್ದು, ಧೈರ್ಯ ಮಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಎಸ್ಪಿ ಪ್ರಕಟನೆಯಲಿ ತಿಳಿದಿದ್ದಾರೆ.
ಪ್ರಕರಣ ಬೆನ್ನತ್ತಿಹೋದ ನಗರ ಠಾಣೆಯ ಪೊಲೀಸರು 6 ಮಹಿಳೆಯರು ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. 3 ಕಾರು, 17 ಮೊಬೈಲ್, 24 ಸಿಮ್, 40670 ರೂ. ನಗದು, 1 ಆಟೊ ಹಾಗೂ 1 ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.








