ಬಡ ಕೂಲಿ ಕಾರ್ಮಿಕರ ಮಕ್ಕಳಿಂದ ಅಸಾಧಾರಣ ಸಾಧನೆ: ವಿಜ್ಞಾನ ರಾ.ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರ ಮನೆಗೆ ಡಿಡಿಪಿಐ ಭೇಟಿ
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ತಲಾ 10,000ರೂ.

ಉಡುಪಿ, ಆ.17: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಡೆಸಿದ ‘ಶಾಲಾ ಮಕ್ಕಳ ಸಿಎಸ್‌ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೌನ್ಸಿಲ್) ಅನ್ವೇಷಣಾ ಪ್ರಶಸ್ತಿ- 2021’ ರಾಷ್ಟ್ರೀಯ ನೂತನ ವಿಜ್ಞಾನ ಆವಿಷ್ಕಾರ ಸ್ಪರ್ಧೆಯಲ್ಲಿ ನಾಲ್ಕನೇ ಪ್ರಶಸ್ತಿಗೆ ಭಾಜನರಾದ ಕುಂದಾಪುರ ತಾಲೂಕಿನ ಕುಗ್ರಾಮವಾದ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಮತ್ತು ರಕ್ಷಿತಾ ನಾಯ್ಕಿ ಇವರ ಮನೆಗಳಿಗೆ ಇಂದು ಭೇಟಿ ನೀಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಪರವಾಗಿ ಇಬ್ಬರನ್ನು ಸನ್ಮಾನಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಜಿಲ್ಲೆಯ ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಅದೂ ತೀರಾ ಹಿಂದುಳಿದ ಕುಡುಬಿ ಜನಾಂಗದ ಇಬ್ಬರು ಬಾಲಕಿಯರ ಸಾಧನೆಗಾಗಿ ತಲಾ ಹತ್ತು ಸಾವಿರ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಶಾಲೆಯ ಮಕ್ಕಳಿಗೆ, ಮುಖ್ಯ ಶಿಕ್ಷಕರಿಗೆ, ಕುಂದಾಪುರದ ಬಿಇಓಗೆ ಹಾಗೂ ಉಡುಪಿ ಡಿಡಿಪಿಐ ಅವರಿಗೆ ಅಭಿನಂದನಾ ಪತ್ರಗಳನ್ನು ಬೆಂಗಳೂರಿನಿಂದ ಕಳುಹಿಸಿದ್ದರು.
ಸಿಎಸ್‌ಐಆರ್ ಪ್ರಶಸ್ತಿಗೆ ಆಯ್ಕೆ ಮಾಡಿರುವ ದೇಶದ ಒಟ್ಟು 14 ಶಾಲೆಗಳಲ್ಲಿ ಸರಕಾರಿ ಶಾಲೆಯಿಂದ ಬಂದ ಮಕ್ಕಳು ಇವರು ಮಾತ್ರ. ಉಳಿದೆಲ್ಲ ಪ್ರಶಸ್ತಿ ವಿಜೇತರು ಹೊಸದಿಲ್ಲಿ ಸೇರಿದಂತೆ ನಗರ ಪ್ರದೇಶಗಳಿಂದ ಬಂದವರಾಗಿದ್ದಾರೆ. ಅನುಷಾ ಮತ್ತು ರಕ್ಷಿತ ನಾಯಕ್ ಅವರು ಸಂಶೋಧಿಸಿದ ಹೊಸ ವಿಜ್ಞಾನ ಆವಿಷ್ಕಾರ ‘ಗ್ಯಾಸ್ ಉಳಿತಾಯದ ಕಿಟ್’ (ಜಿಎಸ್‌ಕೆ) ಅವರಿಗೆ ದೇಶದಲ್ಲಿ ನಾಲ್ಕನೇ ಪ್ರಶಸ್ತಿ ತಂದುಕೊಟ್ಟಿದೆ.
ಡಿಡಿಪಿಐ ಅವರು ಇಂದು ಜಿಲ್ಲಾ ಶಿಕ್ಷಣಾಧಿಕಾರಿ ಜಾಹ್ನವಿ ಸಿ. ಅವರೊಂದಿಗೆ ಇಬ್ಬರು ವಿದ್ಯಾರ್ಥಿನಿಯರ ಮನೆಗೆ ತೆರಳಿ ಅವರನ್ನು ಹಾಗೂ ಪೋಷಕರನ್ನು ಅಭಿನಂದಿಸಿದರು. ಇಬ್ಬರಿಗೂ ಪುಸ್ತಕಗಳನ್ನು ನೀಡಿ ಗೌರವಿಸಿದರು. ಬಳಿಕ ಅವರು ಕಲಿಯುತ್ತಿರುವ ಅಲ್ಬಾಡಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಗೆ ತೆರಳಿ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು.
ಹೆತ್ತವರು ಕೂಲಿಕಾರ್ಮಿಕರು: ಮಡಾಮಕ್ಕಿ ಗ್ರಾಮದ ಮಾರಡಿ ಮಾರ್ಕೈ ನಿವಾಸಿ ಅನುಷಾರ ತಂದೆ ಅಣ್ಣಯ್ಯ ನಾಯ್ಕ ಗಾರೆ ಕೆಲಸ ಮಾಡು ತ್ತಾರೆ. ತಾಯಿ ಪಾರ್ವತಿ ಸಹ ಮನೆಗೆಲಸದೊಂದಿಗೆ ಗಾರೆ ಕೆಲಸಕ್ಕೆ ತೆರಳುತ್ತಾರೆ. ಇನ್ನು ಮಡಾಮಕ್ಕಿ ಗ್ರಾಮದ ಬಡಾ ಬೆಪ್ಡೆ ನಿವಾಸಿ ರಕ್ಷಿತಾ ನಾಯ್ಕರ ತಂದೆ ರವಿ ನಾಯ್ಕ, ಶಾಮಿಯಾನ ಹಾಕುವ ಕೆಲಸ ಮಾಡುತ್ತಾರೆ. ತಾಯಿ ಜಲಜಾ ಮನೆಗೆಲಸ ದೊಂದಿಗೆ ಗಾರೆ ಕೆಲಸಕ್ಕೆ ಹೋಗುತ್ತಾರೆ.
ಒಟ್ಟಾರೆಯಾಗಿ ಇಬ್ಬರೂ ವಿದ್ಯಾರ್ಥಿನಿಯರು ಬಡ ಕೂಲಿಕಾರ್ಮಿಕರ ಮಕ್ಕಳು. ಇಂಥ ಹಿನ್ನೆಲೆಯಿಂದ ಬಂದ ಈ ಮಕ್ಕಳು, ರಾಷ್ಟ್ರಮಟ್ಟದ ಪ್ರಶಸ್ತಿಗೆ ಬಾಜನರಾಗಿರುವುದು ಊರಿಗೆ ಹಾಗೂ ಜಿಲ್ಲೆಗೂ ಹೆಮ್ಮೆಯ ವಿಷಯ ಎಂದು ಮಕ್ಕಳನ್ನು ಹಾಗೂ ಹೆತ್ತವರನ್ನು ಅಭಿನಂದಿಸಿದ ಡಿಡಿಪಿಐ ಪ್ರಶಂಸಿಸಿದರು.






.jpeg)


.jpeg)




