ತೆಂಗಿನಮರ ಮೈಮೇಲೆ ಬಿದ್ದು ವಿಕಲಚೇತನ ಮೃತ್ಯು
ಬ್ರಹ್ಮಾವರ, ಆ.17: ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಅಡುಗೆ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮ ನೂಜಿನಬೈಲು ಎಂಬಲ್ಲಿ ಆ.16ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ನೂಜಿನಬೈಲು ನಿವಾಸಿ ಲೋಕಯ್ಯ ಶೆಟ್ಟಿ ಎಂಬವರ ಮಗ ಪ್ರವೀಣ್ ಶೆಟ್ಟಿ(29) ಎಂದು ಗುರುತಿಸಲಾಗಿದೆ. ವಿಕಲಚೇತನರಾದ ಇವರು, ಅಡುಗೆ ಮನೆಯಲ್ಲಿ ಕುಳಿತುಕೊಂಡಿರುವಾಗ ಮನೆಯ ಸಮೀಪದ ಸಿಡಿಲು ಬಡಿದು ಹಾನಿಯಾಗಿದ್ದ ತೆಂಗಿನ ಮರ ತುಂಡಾಗಿ ಅಡುಗೆ ಮನೆಯ ಸೀಮೆಂಟ್ ಶೀಟಿನ ಮೇಲೆ ಬಿತ್ತೆನ್ನಲಾಗಿದೆ.
ಇದರಿಂದ ಸೀಮೆಂಟು ಶೀಟು ಜಖಂಗೊಂಡು ತೆಂಗಿನ ಮರದ ತುಂಡು ಪ್ರವೀಣ್ ಶೆಟ್ಟಿಯ ಮೈಮೇಲೆ ಬಿತ್ತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಪ್ರವೀಣ್, ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





