ಮಡಿಕೇರಿ : ನೀಲಗಿರಿಯಾದ ಮಾಂದಲ್ ಪಟ್ಟಿ; ಎಲ್ಲಿ ನೋಡಿದರಲ್ಲಿ ಪುಷ್ಪ ರಾಶಿಯದ್ದೇ ದರ್ಬಾರ್

ಮಡಿಕೇರಿ ಆ.17 : ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಕಡುಹಸಿರ ಮೈಬಣ್ಣದ ಮಾಂದಲ್ ಪಟ್ಟಿ ಈಗ ನೀಲಗಿರಿಯಂತ್ತಾಗಿದೆ. ಇಲ್ಲಿ ಅಪರೂಪಕ್ಕೆ ಎಂಬಂತೆ ಬೆಳೆದಿರುವ ನೀಲಿ ಬಣ್ಣದ ಕುಸುಮಗಳು ಹಸಿರ ಬೆಟ್ಟಕ್ಕೆ ಕಿರೀಟವಿಟ್ಟಂತ್ತಿದೆ.
ಹಲವು ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ ಹೂವುಗಳು ಇಡೀ ಮಾಂದಲ್ ಪಟ್ಟಿಯನ್ನೇ ನೀಲಿಯಾಗಿಸಿವೆ. ಬೆಟ್ಟದ ತುಂಬೆಲ್ಲ ಅರಳಿ ನಿಂತಿರುವ ನೀಲ ಕುರುಂಜಿಯು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
“ಹೂವು ಚೆಲುವೆಲ್ಲಾ ನಂದೆಂದಿತು, ಈ ಹಸಿರ ಬೆಟ್ಟವೂ ನಂದೆಂದಿತು” ಎನ್ನುವ ರೀತಿಯಲ್ಲಿ ಪುಷ್ಪ ರಾಶಿ ಅರಳಿ ನಿಂತು ಬೀಗುತ್ತಿವೆ. ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿವೆ. ಎಲ್ಲಿ ನೋಡಿದರಲ್ಲಿ ನೀಲ ಹೂವುಗಳ ಸೊಬಗು ಕಂಗೊಳಿಸುತ್ತಿದ್ದು, ದೇಶ, ವಿದೇಶಗಳ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ಪ್ರಕೃತಿಯನ್ನು ಆರಾಧಿಸುವ ಕೊಡಗು ಜಿಲ್ಲೆಯಲ್ಲಿ ಈ ನೀಲ ಕುರುಂಜಿಗೂ ಮಹತ್ವವನ್ನು ನೀಡಲಾಗಿದ್ದು, ನೀಲಹೂವು ಅರಳಿದ ತಕ್ಷಣ ಸುಬ್ರಹ್ಮಣ್ಯ ದೇವರಿಗೆ ಇಡುವುದು ವಾಡಿಕೆ. ಮಳೆ, ಗಾಳಿ, ಜಲ, ಬೆಳಕಿನೊಂದಿಗೆ ಪ್ರಕೃತಿ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಪಶ್ಚಿಮ ಘಟ್ಟದ ಮಾಂದಲ್ ಪಟ್ಟಿ ಪ್ರಕೃತಿ ಸೌಂದರ್ಯದ ಗಣಿ. ದಟ್ಟವಾದ ಶೋಲಾ ಕಾಡುಗಳಿಂದ ಆವೃತ್ತವಾಗಿರುವ ಮುಗಿಲೆತ್ತರದ ಬೆಟ್ಟ ಶ್ರೇಣಿಗಳು, ಎತ್ತ ನೋಡಿದರೂ ಹಚ್ಚ ಹಸಿರಿನ ಪರಿಸರ, ಮಂಜು ತಬ್ಬುವ ಕಣಿವೆಗಳು ನೋಡುಗರನ್ನು ಮಂತ್ರಮುಗ್ದಗೊಳಿಸುತ್ತವೆ. ನೀಲಿ ಕುರುಂಜಿ ಹೂ ಈ ವರ್ಷ ಅರಳಿದ್ದು, ಬೆಟ್ಟಗಳೆಲ್ಲಾ ನೀಲಿ ಬಣ್ಣದಲ್ಲಿ ಮಿಂದಂತೆ ಭಾಸವಾಗುತ್ತದೆ. ಇಡೀ ಪಶ್ಚಿಮಘಟ್ಟದ ವನ ಸಿರಿಯೇ ನೀಲಿ ಸೀರೆ ಉಟ್ಟಂತೆ ಕಂಡು ಬರುತ್ತಿದೆ.
ಗುರ್ಗಿ ಹೂ :
ಈ ಹೂವಿಗೆ ಗುರ್ಗಿ ಎನ್ನುವ ಹೆಸರು ಕೂಡ ಇದ್ದು, ಇದರಲ್ಲಿ ಹಲವಾರು ಪ್ರಭೇದಗಳಿವೆ. 5, 7, 12, 14 ವರ್ಷಗಳಿಗೆ ಅರಳುವ ಪ್ರಬೇಧದ ಕುರುಂಜಿ ಹೂವುಗಳೂ ಇವೆ. ಮಾಂದಲ್ ಪಟ್ಟಿ, ಕೋಟೆಬೆಟ್ಟ, ಸೂರ್ಲಬ್ಬಿ, ತಡಿಯಂಡಮೋಳ್, ಬ್ರಹ್ಮಗಿರಿ ಬೆಟ್ಟ ಸಾಲುಗಳಲ್ಲೂ ಈ ಕುರುಂಜಿ ಹೂವಿನ ವಿವಿಧ ಪ್ರಬೇಧಗಳು ಆಯಾ ಕಾಲಘಟ್ಟದಲ್ಲಿ ಅರಳುತ್ತವೆ ಮತ್ತು ಸೌಂದರ್ಯ ರಾಶಿಯಿಂದ ಮೆರೆಯುತ್ತವೆ.
.jpeg)







