ಕೇಂದ್ರ ನಿದ್ರೆಯಿಂದ ಎಚ್ಚೆತ್ತುಕೊಂಡು ಅಫ್ಘಾನ್ ನಲ್ಲಿರುವ ಭಾರತೀಯರನ್ನು ರಕ್ಷಿಸಬೇಕು: ಕಾಂಗ್ರೆಸ್
ಹೊಸದಿಲ್ಲಿ, ಆ. 17: ಮೋದಿ ಸರಕಾರ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು ಹಾಗೂ ಬಿಕ್ಕಟ್ಟು ಪೀಡಿತ ಅಫ್ಘಾನಿಸ್ಥಾನದಲ್ಲಿರುವ ಭಾರತಿಯರನ್ನು ರಕ್ಷಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಅಫ್ಘಾನಿಸ್ಥಾನದ ಪರಿಸ್ಥಿತಿ ತೀವ್ರ ಆತಂಕಕಾರಿ ಎಂದು ವಿವರಿಸಿದ ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ, ಭಾರತದ ವ್ಯೆಹಾತ್ಮಕ ಹಿತಾಸಕ್ತಿ ಅಪಾಯದಲ್ಲಿದೆ. ಆದರೆ, ಸರಕಾರ ಅಲ್ಲಿರುವ ತನ್ನ ನಾಗರಿಕರನ್ನು ತೆರವುಗೊಳಿಸುವ ಯಾವುದೇ ಯೋಜನೆ ರೂಪಿಸಿಲ್ಲ. ಇದು ಘೋರವಾದ ಕರ್ತವ್ಯ ಚ್ಯುತಿ ಎಂದರು.
ತಾಲಿಬಾನ್ ಉಗ್ರರು ಸಂಪೂರ್ಣವಾಗಿ ವಶಪಡಿಸಿಕೊಂಡ ಅಫ್ಘಾನಿಸ್ಥಾನದ ಕುರಿತಂತೆ ನಮ್ಮ ಸರಕಾರದ ಪ್ರಬುದ್ಧ ರಾಜಕೀಯ ಹಾಗೂ ರಾಜತಾಂತ್ರಿಕ ಪ್ರತಿಕ್ರಿಯೆಯನ್ನು ನಾವು ಬಯಸುತ್ತೇವೆ ಹಾಗೂ ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವರು ನಮ್ಮ ಪ್ರಜೆಗಳು ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿಯ ಸುರಕ್ಷಿತ ಹಿಂದಿರುಗುವಿಕೆಗೆ ಹಾಗೂ ಭವಿಷ್ಯದ ಬಾಂಧವ್ಯದ ಕುರಿತ ನಮ್ಮ ನೀತಿಯನ್ನು ಸ್ಪಷ್ಟವಾಗಿ ಹೇಳುವ ಅಗತ್ಯತೆ ಇದೆ ಎಂದು ಅವರ ಹೇಳಿದರು.







