ಅಫ್ಘಾನ್ ಬಿಕ್ಕಟ್ಟು ನಿರ್ವಹಣೆಯಲ್ಲಿ ಭಾರತದ ಪಾತ್ರ ಮಹತ್ತರ: ಬ್ರಿಟನ್
ಲಂಡನ್, ಆ.17: ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಬಳಿಕ ಉದ್ಭವಿಸಿರುವ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಬ್ರಿಟನ್ನ ಪ್ರಮುಖ ಸಹಭಾಗಿ ದೇಶವಾಗಿರುವ ಮತ್ತು ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಅಧ್ಯಕ್ಷನಾಗಿರುವ ಭಾರತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಬ್ರಿಟನ್ ಸರಕಾರ ಮಂಗಳವಾರ ಹೇಳಿದೆ.
ಬ್ರಿಟನ್ ಅಥವಾ ಅದರ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿ ನಡೆಸುವ ಭಯೋತ್ಪಾದಕ ದಾಳಿಗಳಿಗೆ ಅಫ್ಘಾನಿಸ್ತಾನದ ನೆಲವನ್ನು ಬಳಸುವುದನ್ನು ತಡೆಯಲು ಅಂತರಾಷ್ಟ್ರೀಯ ಸಂಪರ್ಕ ವೇದಿಕೆಯ ರೀತಿಯ ಸಂಘಟನೆಯನ್ನು ರೂಪಿಸುವತ್ತ ಮುಂದಿನ ದಿನದಲ್ಲಿ ಗಮನ ಹರಿಸಲಾಗುವುದು. ಇದನ್ನು ಸಾಧ್ಯವಾಗಿಸಲು ಸಮಾನಮನಸ್ಕ ದೇಶಗಳ ಜತೆಗಷ್ಟೇ ಅಲ್ಲ, ಗರಿಷ್ಟ ಪ್ರಭಾವ ಬಳಸಬಹುದಾದ ದೇಶಗಳ ಜತೆಗೂ ವ್ಯಾಪಕ ಸಂಪರ್ಕ ಸಾಧಿಸಿ ಕಾರ್ಯನಿರ್ವಹಿಸಬೇಕಿದೆ. ಅಂದರೆ ರಶ್ಯಾ, ಚೀನಾಗಳ ಜತೆ ನಮ್ಮ ನಿಕಟ ಸಹಭಾಗಿಗಳಾದ ಭಾರತ ಇತ್ಯಾದಿ ದೇಶಗಳ ಜತೆಗೂಡಿ ಉಪಕ್ರಮ ಆರಂಭಿಸಬೇಕಿದೆ ಎಂದು ಬ್ರಿಟನ್ನ ವಿದೇಶ ವ್ಯಹವಾರ ಇಲಾಖೆಯ ಸಚಿವ ಡೊಮಿನಿಕ್ ರ್ಯಾಬ್ ಹೇಳಿದ್ದಾರೆ.
ಅಫ್ಘಾನ್ನಲ್ಲಿ ಸಂಘರ್ಷ ಉತ್ತುಂಗ ಮಟ್ಟದಲ್ಲಿದ್ದಾಗ ಬೇಸಿಗೆ ರಜೆಗೆಂದು ತೆರಳಿದ್ದಕ್ಕಾಗಿ ವ್ಯಾಪಕ ಟೀಕೆ ಎದುರಿಸಿದ್ದ ರ್ಯಾಬ್ ಸೋಮವಾರ ರಜೆಯನ್ನು ಮೊಟಕುಗೊಳಿಸಿ ಬ್ರಿಟನ್ಗೆ ಮರಳಿದ್ದಾರೆ. ಬುಧವಾರ ಬ್ರಿಟನ್ ಸಂಸತ್ತಿನ ತುರ್ತು ಅಧಿವೇಶನ ನಡೆಯಲಿದೆ.
ತಾಲಿಬಾನ್ ಗಳು ಇಷ್ಟೊಂದು ಕ್ಷಿಪ್ರವಾಗಿ ದೇಶವನ್ನು ಆಕ್ರಮಿಸಿಕೊಳ್ಳಬಹುದು ಎಂದು ಅಂತರ್ರಾಷ್ಟ್ರೀಯ ಸಮುದಾಯ ನಿರೀಕ್ಷಿಸಿರಲಿಲ್ಲ. ತಾಲಿಬಾನ್ಗಳ ಮುನ್ನಡೆ ನಮ್ಮನ್ನು ಅಚ್ಚರಿಯಲ್ಲಿ ಕೆಡವಿದೆ ಎಂದು ಹೇಳಿದ ಅವರು, ಅಫ್ಗಾನ್ ನಲ್ಲಿ ಮುಂದಿನ ಆಡಳಿತದ ಪರಿಣಾಮದ ಪ್ರಭಾವವನ್ನು ಮಿತಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯತ್ವನ್ನು, ಜಿ7 ರಾಷ್ಟ್ರಗಳ ಸಮಿತಿ ಅಧ್ಯಕ್ಷತೆ ಬಳಸಿಕೊಂಡು, ನಮ್ಮ ನೇಟೊ ಮಿತ್ರರಾಷ್ಟ್ರಗಳಷ್ಟೇ ಅಲ್ಲ, ಚೀನಾ, ರಷ್ಯಾದಂತಹ ಕಠಿಣ ಸಹಭಾಗಿ ದೇಶಗಳ ನೆರವು ಪಡೆಯಲಾಗುವುದು.
ಈ ನಿಟ್ಟಿನಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರ ನಿರ್ವಹಸಲಿದೆ ಎಂದರು. ನಿರ್ಬಂಧ ವಿಧಿಸುವಂತಹ ಉಪಕ್ರಮಗಳ ವಿಷಯಕ್ಕೆ ಬಂದಾಗ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಅಧ್ಯಕ್ಷತೆ ವಹಿಸಿರುವ ಭಾರತ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಚೀನಾವು ಬ್ರಿಟನ್ ನ ಕಠಿಣ ಸಹಭಾಗಿ ದೇಶವಾಗಿದ್ದರೂ, ಎರಡೂ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯರಾಗಿರುವುದರಿಂದ ಉಭಯ ದೇಶಗಳೂ ಸಾಮಾನ್ಯ ಹಿತಾಸಕ್ತಿ ಹೊಂದಿವೆ.
ಅಫ್ಘಾನಿಸ್ತಾನದಲ್ಲಿ ನೆರವಿನ ಗರಿಷ್ಟ ಅಗತ್ಯವಿರುವವರಿಗೆ, ವಿಶೇಷವಾಗಿ ಮಹಿಳೆಯರು ಹಾಗೂ ಯುವತಿಯರಿಗೆ ಸೂಕ್ತವಾದ ಪುನರ್ವಸತಿ ಯೋಜನೆಯನ್ನು ರೂಪಿಸುವ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಗೃಹ ಸಚಿವೆ ಪ್ರೀತಿ ಪಟೇಲ್ ಸಮಾಲೋಚಿಸಿದ್ದಾರೆ ಎಂದು ಡೊಮಿನಿಕ್ ರ್ಯಾಬ್ ಹೇಳಿದ್ದಾರೆ.







