ತಲಪಾಡಿ: ಮಾಲಿಕಿ ಉರ್ದು ಇಸ್ಲಾಮಿಕ್ ಕ್ಯಾಂಪಸ್‌ಗೆ ಚಾಲನೆ

ವಿಟ್ಲ : ಜಾಗತಿಕ ಮುಸ್ಲಿಮರ ಪ್ರಮುಖ ಭಾಷೆಯಾದ ಉರ್ದುವಿಗೆ ಮಹತ್ವ ನೀಡುವುದರೊಂದಿಗೆ ಶಾಫಿಈ- ಹನಫಿ ಕರ್ಮಶಾಸ್ತ್ರ ಹಾಗೂ ದೌರತುಲ್ ಹದೀಸ್ ಒಳಗೊಳ್ಳುವ ಒಂದು ವರ್ಷದ 'ಮಾಲಿಕಿ' ಪದವಿ ಕೋರ್ಸ್ ನೀಡುವ 'ಜಾಮಿಆ ಮಾಲಿಕ್ ದೀನಾರ್' ಸಂಸ್ಥೆಗೆ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ನಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಚಾಲನೆ ನೀಡಿದರು.
ತಲಪಾಡಿ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ರಾಜ್ಯ ಸುನ್ನೀ ಕೋ ಆರ್ಡಿನೇಷನ್ ಸಮಿತಿಯ ಅಧ್ಯಕ್ಷ ಕೆಪಿ ಹುಸೈನ್ ಸಅದಿ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು.
ಸ್ಥಳೀಯ ಜಮಾಅತ್ ಅಧ್ಯಕ್ಷ ಯಾಕೂಬ್ ಪೂಮಣ್ಣು ಅಧ್ಯಕ್ಷತೆ ವಹಿಸಿದ್ದರು.
ನಿಗದಿತ ದರ್ಸ್ ಕಿತಾಬ್‌ಗಳನ್ನು ಓದಿ, ಸಂದರ್ಶನದಲ್ಲಿ ತೇರ್ಗಡೆಯಾದ ವಿದ್ವಾಂಸರಿಗೆ ಪ್ರವೇಶ ನೀಡುವ ಸಂಸ್ಥೆ ಇದಾಗಿದ್ದು ಹಗಲು ಹೊತ್ತಿನಲ್ಲಿ ಬಂದು ಕಲಿತು ಹೋಗುವ ಸ್ಥಳೀಯ ಉಲಮಾಗಳಿಗೆ ವಿಶೇಷ ಪಠ್ಯ ವ್ಯವಸ್ಥೆ ಅಳವಡಿಸಿ ಕೊಳ್ಳಲಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್‌ನಲ್ಲಿ ಮುದರ್ರಿಸ್ ಹಾಗೂ ಖತೀಬ್ ಆಗಿ ಸೇವೆಗೈಯ್ಯುತ್ತಿರುವ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರು ಪ್ರಾಂಶುಪಾಲರಾಗಿ ಸಂಸ್ಥೆಗೆ ನೇತೃತ್ವ ಕೊಡುತ್ತಿದ್ದು, ಪ್ರಮುಖ ವಿದ್ವಾಂಸರಾದ ಹಾಫಿಝ್ ಮುಹಮ್ಮದ್ ವಹೀದ್ ನಈಮಿ ಕಾಮಿಲ್ ಸಖಾಫಿ ಅಜ್ಮೀರ್, ಮೌಲಾನಾ ಖಾರಿ ಅಹ್ಮದ್ ರಝಾ ಖಾನ್ ಮರ್ಕಝಿ ಉತ್ತರ ಪ್ರದೇಶ, ಮುಹಮ್ಮದ್ ಬಶೀರ್ ಅಹ್ಸನಿ ತೋಡಾರ್, ಜಾಬಿರ್ ಹಸನ್ ಫಾಳಿಲಿ ಉಳ್ಳಾಲ ಮುಂತಾದವರು ವಿವಿಧ ವಿಷಯಗಳ ಮುದರ್ರಿಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಮುಖ ವಿದ್ವಾಂಸರೂ ಪ್ರಸಿದ್ಧ ಕವಿಯೂ ಆಗಿದ್ದ ಖಾಝಿ ಬಾಪಕುಂಞಿ ಮುಸ್ಲಿಯಾರ್ ಅವರು ತಲಪಾಡಿ ಬಿಲಾಲ್ ಜುಮಾ ಮಸೀದಿಯ ಸಮೀಪದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿದ್ದು ಅವರ ಸ್ಮರಣಾರ್ಥ ಸಂಸ್ಥೆಯ ಹೆಸರಿಗೆ 'ಖಾಝಿ ಬಾಪಕುಂಞಿ ಮುಸ್ಲಿಯಾರ್ ಅಕಾಡೆಮಿ' ಎಂದು ಹೆಸರಿಡಲಾಗಿದೆ ಎಂದು ಸಂಸ್ಥೆಯ ಪ್ರಿನ್ಸಿಪಾಲ್ ಡಾ. ಅಬ್ದುಲ್ ರಶೀದ್ ಝೈನೀ ತಿಳಿಸಿದರು.







