ಬೆಂಗಳೂರು: ಸಾಂತ್ವನ ಕೇಂದ್ರದಿಂದ ಕಾಂಪೌಂಡ್ ಹಾರಿ 5 ವಿದೇಶಿ ಮಹಿಳೆಯರು ಪರಾರಿ
ಬೆಂಗಳೂರು, ಆ.17: ಮಹಿಳಾ ಸಾಂತ್ವನ ಕೇಂದ್ರದ ಕಾಂಪೌಂಡ್ ಹಾರಿ ಐದು ಮಂದಿ ವಿದೇಶಿ ಮಹಿಳೆಯರು ಪರಾರಿಯಾಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಂಪೌಂಡ್ ಹಾರುತ್ತಿದ್ದಾಗ ಒಬ್ಬ ಮಹಿಳೆ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೂರ್ವ ವಿಭಾಗದ ಪೊಲೀಸರು ಇತ್ತೀಚೆಗೆ ವಿದೇಶಿಗರು ನೆಲೆಸಿರುವಂತಹ ವಾಸದ ಮನೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ವೀಸಾ, ಪಾಸ್ ಪೋರ್ಟ್ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನೆಲೆಸಿರುವುದು ಕಂಡುಬಂದಿತ್ತು. ಆ ಸಂದರ್ಭದಲ್ಲಿ 13 ಮಹಿಳೆಯರನ್ನು ವಶಕ್ಕೆ ಪಡೆದು ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು.
ಚಾಲಾಕಿ ವಿದೇಶಿ ಮಹಿಳೆಯರು ರಾತ್ರಿ ನೀರು ಕೇಳಿದ್ದಾರೆ. ಆ ವೇಳೆ ಸಿಬ್ಬಂದಿ ಬಾಗಿಲು ತೆಗೆದು ನೀರು ಕೊಟ್ಟಿದ್ದಾರೆ. ಇದೇ ಸಂದರ್ಭ ಕಾಯುತ್ತಿದ್ದ 5 ಮಂದಿ ವಿದೇಶಿ ಮಹಿಳೆಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಕಾಂಪೌಂಡ್ ನೆಗೆಯುವ ವೇಳೆ ಒಬ್ಬ ಮಹಿಳೆ ಬಿದ್ದು ಕಾಲು ಮುರಿದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಿಗಿ ಭದ್ರತೆ ಇದ್ದಾಗ್ಯೂ ಸಹ ಈ ಮಹಿಳೆಯರು ಸಿಬ್ಬಂದಿಗೆ ನೀರು ಕೇಳುವ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಪರಾರಿಯಾಗಿದ್ದಾರೆ.
ಪರಾರಿಯಾಗಿರುವವರ ಪೈಕಿ ಮೂವರು ಕಾಂಗೋ ದೇಶದವರು ಮತ್ತು ಇಬ್ಬರು ನೈಜೀರಿಯಾ ದೇಶದವರು ಎಂದು ಸಿದ್ದಾಪುರ ಠಾಣೆ ಪೊಲೀಸರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವಿದೇಶಿ ಮಹಿಳೆಯರಿಗಾಗಿ ಶೋಧ ಕೈಗೊಂಡಿದ್ದಾರೆ.







