ಸಂಸತ್ತಿನಲ್ಲಿ ಗದ್ದಲ: ದಂಡನೆ ಕುರಿತು ನಿರ್ಧಾರಕ್ಕೆ ವಿಶೇಷ ಸಮಿತಿ ರಚನೆಯ ಸಾಧ್ಯತೆ
ಹೊಸದಿಲ್ಲಿ,ಆ.17: ರಾಜ್ಯಸಭೆಯಲ್ಲಿ ಗದ್ದಲವನ್ನು ಸೃಷ್ಟಿಸುವ ಸದಸ್ಯರ ವಿರುದ್ಧ ಕ್ರಮಕ್ಕಾಗಿ ಆಡಳಿತ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳ ಏಳು ಅಥವಾ ಒಂಭತ್ತು ಹಿರಿಯ ಸಂಸದರನ್ನೊಳಗೊಂಡ ಸಮಿತಿಯೊಂದನ್ನು ರಚಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಒಂದು ತಿಂಗಳ ಒಳಗೆ ತನ್ನ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸುವಂತೆ ಈ ಸಮಿತಿಗೆ ಸೂಚಿಸಬಹುದು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೋಲಾಹಲವನ್ನು ಸೃಷ್ಟಿಸಿ ನಿರಂತರ ವ್ಯತ್ಯಯಗಳಿಗೆ ಕಾರಣರಾಗಿದ್ದ ಸಂಸದರನ್ನು ನಿದರ್ಶನವಾಗಿಸಲು ಸರಕಾರವು ದೃಢಸಂಕಲ್ಪವನ್ನು ಮಾಡಿದೆ ಎಂದೂ ಈ ಮೂಲಗಳು ತಿಳಿಸಿವೆ.
ಸರಕಾರವು ರವಿವಾರ ಕಾಂಗ್ರೆಸ್, ಟಿಎಂಸಿ, ಶಿವಸೇನೆ, ಆಪ್ ಮತ್ತು ಎಡಪಕ್ಷಗಳಿಗೆ ಸೇರಿದ 15ಕ್ಕೂ ಅಧಿಕ ಸಂಸದರನ್ನು ಹೆಸರಿಸಿ ಲಿಖಿತ ದೂರೊಂದನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಕಳುಹಿಸಿದ್ದು, ಏಳು ಕೇಂದ್ರಸಚಿವರ ನಿಯೋಗವೊಂದು ನಾಯ್ಡು ಅವರನ್ನು ಭೇಟಿಯಾಗಿ ಈ ದೂರನ್ನು ಸಲ್ಲಿಸಿದೆ.
ಕಾಂಗ್ರೆಸ್ ನ ದೀಪಿಂದರ್ ಹೂಡಾ,ರಾಜಮಣಿ ಪಟೇಲ,ಅಖಿಲೇಶ ಪ್ರಸಾದ ಸಿಂಗ್,ಪ್ರತಾಪ ಸಿಂಗ್ ಬಾಜ್ವಾ,ರಿಪುನ್ ಬೋರಾ, ಸೈಯದ್ ನಾಸಿರ್ ಹುಸೇನ್, ಫೂಲೋ ದೇವಿ ಮತ್ತು ಛಾಯಾ ವರ್ಮಾ, ಟಿಎಂಸಿಯ ಆಬಿರ್ ರಂಜನ ಬಿಸ್ವಾಸ್, ಡೋಲಾ ಸೇನ್, ಅರ್ಪಿತಾ ಘೋಷ್, ಶಾಂತಾ ಛೆತ್ರಿ ಮತ್ತು ಮೌಸಂ ನೂರ್, ಶಿವಸೇನೆಯ ಅನಿಲ್ ದೇಸಾಯಿ ಮತ್ತು ಪ್ರಿಯಾಂಕಾ ಚತುರ್ವೇದಿ,ಎಡಪಕ್ಷಗಳ ಇಲ್ಮಾರಮ್ ಕರೀಂ ಹಾಗೂ ಆಪ್ನ ಸಂಜಯ ಸಿಂಗ್ ಅವರ ಹೆಸರುಗಳು ದೂರಿನಲ್ಲಿ ಸೇರಿವೆ.
ಜೆಡಿಯು,ಎಐಎಡಿಎಂಕೆ,ಆರ್ಪಿಐ,ಎನ್ಪಿಪಿ,ಎಜಿಪಿಯಂತಹ ಬಿಜೆಪಿಯ ಮಿತ್ರಪಕ್ಷಗಳೂ ಇಂತಹುದೇ ಲಿಖಿತ ದೂರನ್ನು ಸಲ್ಲಿಸಿವೆ.
ಕಲಾಪಗಳ ಸಂದರ್ಭ ಈ ಸಂಸದರು ಅಧಿಕಾರಿಗಳ ಮೇಜನ್ನು ಹತ್ತಿದ್ದರು ಮತ್ತು ಮಹಿಳಾ ಮಾರ್ಷಲ್ಗಳನ್ನು ತಳ್ಳಿದ್ದರು ಎಂದು ಸರಕಾರವು ದೂರಿನಲ್ಲಿ ಆರೋಪಿಸಿದೆ.
ಆ.11ರಂದು ರಾಜ್ಯಸಭೆಯಲ್ಲಿ ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆಯನ್ನು ಆಯ್ಕೆ ಸಮಿತಿಗೆ ಸಲ್ಲಿಸುವಂತೆ ಒತ್ತಾಯಿಸಲಾಗಿತ್ತಾದರೂ ಅದನ್ನು ಪರಿಗಣಿಸದೆ ಮಸೂದೆಯು ಅಂಗೀಕಾರಗೊಂಡಾಗ ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದವು.
ಇತರರಿಗೆ ನಿದರ್ಶನವಾಗಿಸಲು ಗದ್ದಲವನ್ನು ಸೃಷ್ಟಿಸಿದ್ದ ಸಂಸದರ ವಿರುದ್ಧ ಕಠಿಣ ಕ್ರಮವನ್ನು ಸರಕಾರವು ಬಯಸಿದೆ ಎಂದು ಮೂಲಗಳು ತಿಳಿಸಿದವು. ಆದರೆ ಇಂತಹ ಕಠಿಣ ಕ್ರಮಕ್ಕೆ ರಾಜ್ಯಸಭೆಯ ಸಭಾಪತಿಗಳು ಒಲವನ್ನು ತೋರಿಸಿಲ್ಲ,ಆದರೂ ದಂಡನೆಯು ಕಠಿಣವಾಗಿರಲಿದೆ ಮತ್ತು ಇದಕ್ಕಾಗಿ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಅವು ಹೇಳಿವೆ.







