ಅರಾಜಕತೆಗೆ ಅಶ್ರಫ್ ಘನಿ ಹೊಣೆ: ಅಫ್ಘಾನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಆಕ್ರೋಶ
ಅಫ್ಘಾನ್ ದೇಶ ಕ್ಷಿಪ್ರವಾಗಿ ತಾಲಿಬಾನ್ಗಳ ಕೈವಶವಾಗಲು ಮತ್ತು ಅರಾಜಕತೆಯ ಸ್ಥಿತಿಗೆ ಅಧ್ಯಕ್ಷ ಅಶ್ರಫ್ ಘನಿ ಮತ್ತವರ ಅನನುಭವಿ ಸಲಹಾಗಾರರು ಕಾರಣ ಎಂದು ಕಾಬೂಲ್ನಿಂದ ಪಲಾಯನ ಮಾಡಿರುವ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ನ ಮುಖ್ಯಸ್ಥ ಅಜ್ಮಲ್ ಅಹ್ಮದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಉಗ್ರರು ಕಾಬೂಲ್ನ ಹೆಬ್ಬಾಗಿಲು ತಲುಪುವವರೆಗೂ ನಾನು ಬ್ಯಾಂಕ್ನಲ್ಲಿ ಕರ್ತವ್ಯದಲ್ಲಿದ್ದೆ. ಅಂದು ಬೆಳಗ್ಗಿನಿಂದಲೇ ಕೇಳಿಬರುತ್ತಿದ್ದ ಸುದ್ಧಿಗಳು ಆತಂಕಕಾರಿಯಾಗಿದ್ದವು. ಸಹಾಯಕರನ್ನು ಕರ್ತವ್ಯದಲ್ಲಿ ನಿಯೋಜಿಸಿ ಬ್ಯಾಂಕ್ನಿಂದ ತೆರಳಿದೆ. ಬ್ಯಾಂಕ್ನ ಸಿಬಂದಿಗಳನ್ನು ಬಿಟ್ಟು ತೆರಳಲು ಮನಸಿರಲಿಲ್ಲ ಎಂದು ಅಹ್ಮದಿ ಸೋಮವಾರ ಟ್ವೀಟ್ ಮಾಡಿದ್ದಾರೆ.
ಇದು ಇಷ್ಟು ಬೇಗ ಕೊನೆಗೊಳ್ಳುವುದೆಂದು ನಾನು ಭಾವಿಸಿರಲಿಲ್ಲ. ಅಫ್ಘಾನ್ ನಾಯಕತ್ವದ ಬಳಿ ಯಾವುದೇ ಯೋಜನೆಗಳಿರಲಿಲ್ಲ. ನಮ್ಮ ನಾಯಕರು ಯಾರಿಗೂ ಮಾಹಿತಿ ನೀಡದೆ ವಿಮಾನ ನಿಲ್ದಾಣದ ಮೂಲಕ ಪಲಾಯನ ಮಾಡಿರುವುದನ್ನು ನೋಡಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಂಬಲು ಕಷ್ಟವಾಗುತ್ತಿದೆ, ಆದರೆ ಅಫ್ಘಾನ್ ಭದ್ರತಾ ಪಡೆ ಸೇನಾ ನೆಲೆಯನ್ನು ಅಷ್ಟು ಸುಲಭದಲ್ಲಿ ಮತ್ತು ಕ್ಷಿಪ್ರವಾಗಿ ಬಿಟ್ಟುಕೊಟ್ಟಿರುವ ಬಗ್ಗೆ ಶಂಕೆ ಮೂಡುತ್ತಿದೆ. ಇಲ್ಲಿ ಹಲವಾರು ಉತ್ತರ ಸಿಗದ ಪ್ರಶ್ನೆಗಳಿವೆ ಎಂದವರು ಹೇಳಿದ್ದಾರೆ. ವಿಶ್ವಬ್ಯಾಂಕ್, ಅಮೆರಿಕದ ಖಜಾನೆ ಇಲಾಖೆ ಸೇರಿದಂತೆ ಹಲವು ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅಹ್ಮದಿಯನ್ನು ಒಂದು ವರ್ಷದ ಕೆಳಗೆ ಅಫ್ಗಾನ್ ಸೆಂಟ್ರಲ್ ಬ್ಯಾಂಕ್ನ ಪ್ರಭಾರೀ ಗವರ್ನರ್ ಆಗಿ ನೇಮಿಸಲಾಗಿತ್ತು.







