"ಅಪ್ಘಾನಿಸ್ಥಾನದ ಜನರ ಕೈಬಿಟ್ಟಿಲ್ಲ, ಮೈತ್ರಿ ಮುಂದುವರಿಯಲಿದೆ"
ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿದ ಭಾರತೀಯ ರಾಯಭಾರಿ ಹೇಳಿಕೆ
ಹೊಸದಿಲ್ಲಿ, ಆ. 17: ಅಪ್ಘಾನಿಸ್ಥಾನದಲ್ಲಿನ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಭಾರತೀಯ ರಾಯಭಾರಿ ಕಚೇರಿಯ ಇತರ ಹಲವು ಅಧಿಕಾರಿಗಳು, ಸಿಬ್ಬಂದಿ ಹಾಗೂ ಭಾರತೀಯ ನಾಗರಿಕರೊಂದಿಗೆ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ. ತಾಲಿಬಾನ್ ಉಗ್ರರ ವಶಕ್ಕೊಳಗಾಗಿರುವ ಕಾಬೂಲ್ನಿಂದ ಸುರಕ್ಷಿತವಾಗಿ ಮಂಗಳವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ ಬಳಿಕ ರುದ್ರೇಂದ್ರ ಟಂಡನ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, ಅಫ್ಘಾನಿಸ್ಥಾನದ ರಾಜಧಾನಿಯನ್ನು ತಾಲಿಬಾನಿ ಉಗ್ರರು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ಅಪ್ಘಾನಿಸ್ಥಾನದ ರಾಜಧಾನಿ ಹಾಗೂ ಇತರ ಪ್ರಮುಖ ಪ್ರಾಂತ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನಿಗಳು ಪ್ರತಿಪಾದಿಸುವುದರೊಂದಿಗೆ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಟಂಡನ್ ತಿಳಿಸಿದರು. ಆದರೆ, ನಾವು ನಮ್ಮ ತಾಯ್ನಿಡಿಗೆ ಮರಳಿದ್ದೇವೆ. ಇದರ ಅರ್ಥ ನಾವು ಅಪ್ಘಾನಿಸ್ಥಾನದ ಜನರನ್ನು ಕೈಬಿಟ್ಟಿದ್ದೇವೆ ಎಂದಲ್ಲ. ಅವರ ಕಲ್ಯಾಣ ಹಾಗೂ ಅವರೊಂದಿಗಿನ ಸಂಬಂಧ ನಮ್ಮ ಮನಸ್ಸಿನಲ್ಲಿ ಯಾವಾಗಲೂ ಇರುತ್ತದೆ. ಅವರೊಂದಿಗಿನ ಸಂವಹನವನ್ನು ಮುಂದುವರಿಸಲು ನಾವು ಪ್ರಯತ್ನಿಸುತ್ತೇವೆ. ಪರಿಸ್ಥಿತಿ ಯಾವ ರೀತಿಯಲ್ಲಿ ಬದಲಾಗುತ್ತದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಟಂಡನ್ ಹೇಳಿದ್ದಾರೆ.
ಕಾಬೂಲ್ನಲ್ಲಿರುವ ಇತರ ಭಾರತೀಯರ ವಾಪಸಾತಿ ಕುರಿತು ಮಾತನಾಡಿದ ಅವರು, ‘‘ಈಗಲೂ ಅಲ್ಲಿ ಕೆಲವು ಭಾರತೀಯರು ಇರುವುದರಿಂದ, ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಆದುದರಿಂದ ಕಾಬೂಲ್ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವ ವರೆಗೆ ಏರ್ ಇಂಡಿಯಾ ವಿಮಾನ ಸಂಚಾರ ಮುಂದುವರಿಯಲಿದೆ’’ ಎಂದು ಅವರು ಹೇಳಿದರು.
‘‘ವಿಮಾನ ನಿಲ್ದಾಣದ ಪರಿಸ್ಥಿತಿಯ ಕಾರಣಕ್ಕೆ ಏರ್ ಇಂಡಿಯಾ ತಾತ್ಕಾಲಿಕವಾಗಿ ತನ್ನ ಸೇವೆ ರದ್ದುಗೊಳಿಸಿದೆ. ಆದರೆ, ಅಲ್ಲಿ ಸಿಲುಕಿರುವವರನ್ನು ಹೇಗಾದರೂ ಇಲ್ಲಿಗೆ ತರುವ ಖಾತರಿ ನೀಡುತ್ತೇವೆ. ಅದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವು ಕೇಂದ್ರ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ’’ ಎಂದು ರುದ್ರೇಂದ್ರ ಟಂಡನ್ ತಿಳಿಸಿದ್ದಾರೆ.







