ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ
![ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ](https://www.varthabharati.in/sites/default/files/images/articles/2021/08/18/303100-1629270132.gif)
ಮಂಗಳೂರು, ಆ.18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್ಟಿಪಿಸಿಆರ್ ಉಪಕರಣ ಅಳವಡಿಸಿದ ಹಿನ್ನೆಲೆಯಲ್ಲಿ ಇಂದಿನಿಂದ (ಆ.18) ಮಂಗಳೂರು-ಯುಎಇ ನಡುವೆ ವಿಮಾನ ಸಂಚಾರ ಪುನಾರಂಭಗೊಳ್ಳಲಿದೆ.
ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರ ಮಂಗಳೂರಿನಿಂದ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್ಟಿ-ಪಿಸಿಆರ್ ಉಪಕರಣ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ರಾಪಿಡ್ ಆರ್ಟಿಪಿಸಿಆರ್ ವ್ಯವಸ್ಥೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪರಾಹ್ನ ವಿಮಾನ ಸಂಚಾರ ಆರಂಭಗೊಳ್ಳಲಿದೆ.
ಇತ್ತೀಚಿನ ಯುಎಇ ಸರಕಾರದ ಆರೋಗ್ಯ ಸಚಿವಾಲಯ ತನ್ನ ದೇಶಕ್ಕೆ ಆಗಮಿಸುವ ಪ್ರತಿ ಪ್ರಯಾಣಿಕರೂ ವಿಮಾನ ಹತ್ತುವುದಕ್ಕೆ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್ಟಿ-ಪಿಸಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯನ್ನು ಒಪ್ಪಿಸುವುದು ಕಡ್ಡಾಯಗೊಳಿಸಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಸೌಲಭ್ಯ ಇಲ್ಲದೆ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಇದೀಗ ರಾಪಿಡ್ ಟೆಸ್ಟ್ ಗೆ ಉಪಕರಣ ಅಳವಡಿಸುವ ಮೂಲಕ ಯುಎಇ ಪ್ರಯಾಣಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿದಿದೆ.