ಕ್ರೊಯೇಶಿಯದ ಪ್ರಮುಖ ಫುಟ್ಬಾಲ್ ಕ್ಲಬ್ ಗೆ ಭಾರತದ ಆಟಗಾರ ಸಂದೇಶ್ ಜಿಂಗಾನ್ ಸೇರ್ಪಡೆ

ಹೊಸದಿಲ್ಲಿ: ಎಟಿಕೆ ಮೋಹನ್ ಬಗಾನ್ ಎಫ್ ಸಿ ಅನ್ನು ತೊರೆದಿರುವ ಸಂದೇಶ್ ಜಿಂಗಾನ್ ಕ್ರೊಯೇಶಿಯದ ಫುಟ್ಬಾಲ್ ಕ್ಲಬ್ ಎಚ್ ಎನ್ ಕೆ ಸಿಬೆನಿಕ್ ಗೆ ಸೇರ್ಪಡೆಯಾಗಲಿದ್ದು, ಕ್ರೊಯೇಶಿಯದ ಅಗ್ರ ಶ್ರೇಣಿಯ ಫುಟ್ಬಾಲ್ ಲೀಗ್ ಪ್ರವ ಎಚ್ ಎನ್ ಎಲ್ ನಲ್ಲಿ ಆಡಲಿರುವ ಭಾರತದ ಮೊದಲ ಅಂತರ್ ರಾಷ್ಟ್ರೀಯ ಫುಟ್ಬಾಲ್ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕಳೆದ ತಿಂಗಳು ಭಾರತದ ವರ್ಷದ ಫುಟ್ಬಾಲ್ ಆಟಗಾರನಾಗಿ ಹೆಸರಿಸಲ್ಪಟ್ಟಿರುವ 28ರ ಹರೆಯದ ಜಿಂಗಾನ್ ಈಗಾಗಲೇ ಕ್ರೊಯೇಶಿಯದಲ್ಲಿದ್ದಾರೆ.
"ನಾವು ಅವರಿಂದ ಉತ್ತಮವಾದುದನ್ನು ನಿರೀಕ್ಷಿಸುತ್ತಿದ್ದೇವೆ. ವಿವಿಧ ವೇದಿಕೆಗಳಲ್ಲಿ ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆ. ಅವರನ್ನು ಕ್ಲಬ್ ಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇನ್ನು ಕೆಲವು ವಾರ ತೆಗೆದುಕೊಳ್ಳಬಹುದು. ಅವರ ಗುಣ ಹಾಗೂ ನಾಯಕತ್ವ ತಂಡದ ಪ್ರಮುಖ ಸದಸ್ಯರನ್ನಾಗಿಸುವ ವಿಶ್ವಾಸ ನಮಗಿದೆ'' ಎಂದು ಎಚ್ ಎನ್ ಕೆ ಸಿಬೆನಿಕ್ ನ ಸಿಇಒ ಫ್ರಾನ್ಸಿಸ್ಕೊ ಕಾರ್ಡೊನ ಹೇಳಿದ್ದಾರೆ.
ಸಂದೇಶ್ ತನ್ನ 21ನೇ ವಯಸ್ಸಿನಲ್ಲಿ ಮೊದಲ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಲ್ಲರ ಗಮನ ಸೆಳೆದಿದ್ದು, 2014ರಲ್ಲಿ ಲೀಗ್ ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು. ಈ ಸಾಧನೆ ಮೂಲಕ 2015ರಲ್ಲಿ ಹಿರಿಯರ ತಂಡದ ಪರ ನೇಪಾಳದ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. ಕೇರಳ ಬ್ಲಾಸ್ಟರ್ ಎಫ್ ಸಿ ಪರ ಎರಡು ಬಾರಿ ಐಎಸ್ ಎಲ್ ರನ್ನರ್ಸ್ ಅಪ್ ಆಗಿರುವ ಸಂದೇಶ್ 2020ರಲ್ಲಿ ಎಟಿಕೆ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ಅನ್ನು ಸೇರಿದ್ದರು.