ಅಫ್ಘಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಗರಿಷ್ಟ ಪ್ರಯತ್ನ: ಕೇಂದ್ರ ಸರಕಾರ

ಹೊಸದಿಲ್ಲಿ, ಆ.18: ಅಫ್ಘಾನ್ ತಾಲಿಬಾನ್ ವಶವಾದ ಬಳಿಕ ಅಲ್ಲಿ ಅತಂತ್ರರಾಗಿರುವ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.
ಅಫ್ಘಾನ್‌ನಲ್ಲಿದ್ದ ಭಾರತದ ರಾಯಭಾರಿ ಹಾಗೂ ಅಲ್ಲಿನ ಸಿಬಂದಿಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ನಾಗರಿಕರನ್ನು ಮರಳಿ ಕರೆತರಲಾಗುವುದು. ವಂದೇ ಭಾರತ್ ಅಭಿಯಾನದಂತೆ, ಏರಿಂಡಿಯಾ ವಿಮಾನ ಅಥವಾ ವಾಯುಪಡೆ ವಿಮಾನ.. ಹೀಗೆ ಸಾಧ್ಯವಿರುವ ರೀತಿಯಲ್ಲಿ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.
ಅಫ್ಘಾನ್ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಭಾರತ ಸಹಿತ ಹಲವು ದೇಶಗಳು ಅಲ್ಲಿಂದ ತಮ್ಮ ಪ್ರಜೆಗಳನ್ನು ತೆರವುಗೊಳಿಸಲು ಭಾರೀ ಪ್ರಯತ್ನ ನಡೆಸಿವೆ. ಆದರೂ ಇನ್ನೂ ಹಲವರು ಅಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ‘ತಾನು ಹಲವು ಬಾರಿ ಕರೆ ಮಾಡಿದರೂ ಅಧಿಕಾರಿಗಳು ತನ್ನನ್ನು ಸಂಪರ್ಕಿಸುವ ಪ್ರಯತ್ನ ನಡೆಸಿಲ್ಲ. ಕಟ್ಟಡಗಳ ಮೇಲೆ, ಹೋಟೆಲ್‌ಗಳಲ್ಲಿ ಅಡಗಿ ಕುಳಿತಿದ್ದೇವೆ. ನಮ್ಮಲ್ಲಿರುವ ಅಗತ್ಯದ ವಸ್ತುಗಳು ಖಾಲಿಯಾಗಿವೆ. ಕೆಲವು ಸ್ಥಳೀಯರು ಒದಗಿಸುವ ನೆರವಿನಿಂದ ಕಳೆದ 4 ದಿನಗಳಿಂದ ಬದುಕಿ ಉಳಿದಿದ್ದೇವೆ’ ಎಂದು ಅಫ್ಘಾನ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಯೊಬ್ಬರು ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಕಾಬೂಲ್‌ನ ಬಖ್ತಾರ್ ವಿವಿಯ ಶಿಕ್ಷಕರಾಗಿರುವ 4 ಭಾರತೀಯರು ತಾಯ್ನಾಡಿಗೆ ಮರಳಲು ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಸಾಧ್ಯವಿರುವ ಎಲ್ಲಾ ಸಂಘಟನೆಗಳು, ವೇದಿಕೆಗಳನ್ನು ಸಂಪರ್ಕಿಸಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದೇವೆ. ಭಾರತ ಸರಕಾರ ನಮ್ಮನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ವಿವಿಯಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಾಗಿರುವ ಜಮ್ಮು ಕಾಶ್ಮೀರದ ಮುಹಮ್ಮದ್ ಆಸಿಫ್ ಶಾ ಹೇಳಿರುವುದಾಗಿ ವರದಿಯಾಗಿದೆ. ಉತ್ತರಾಖಂಡದ ಹಲವು ಜನರೂ ಅಫ್ಘಾನ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು ಅವರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್‌ರನ್ನು ಆಗ್ರಹಿಸಿದ್ದಾರೆ.







