ಕೋಲ್ ಇಂಡಿಯಾ ಕಾರ್ಮಿಕರ ವೇತನದಲ್ಲಿ ಶೇ.50 ಏರಿಕೆಗೆ ಆಗ್ರಹ
ಹೊಸದಿಲ್ಲಿ, ಆ.19: ವಿಶ್ವದ ಅತಿ ದೊಡ್ಡ ಗಣಿ ಉದ್ಯಮ ಸಂಸ್ಥೆಯಾದ ಕೋಲ್ ಇಂಡಿಯಾ ಲಿಮಿಟೆಡ್‌ನ ಕಾರ್ಮಿಕ ಒಕ್ಕೂಟಗಳು ಕಾರ್ಮಿಕರ ಕೂಲಿದರದಲ್ಲಿ ಶೇ.50ರಷ್ಟು ಏರಿಕೆಗೆ ಆಗ್ರಹಿಸಿವೆ. ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮುಂಬರುವ ವರ್ಷಗಳಲ್ಲಿ ಲಾಭದಲ್ಲಿ ಏರಿಕೆ ಮಾಡುವ ಕುರಿತಾದ ಕೋಲ್ ಇಂಡಿಯಾ ಹಮ್ಮಿಕೊಂಡಿರುವ ಯೋಜನೆಗಳ ಹಿಂದೆಯೇ ಕಾರ್ಮಿಕ ಒಕ್ಕೂಟಗಳು ಈ ಬೇಡಿಕೆ ಮಂಡಿಸಿವೆ ಎಂದು ಭಾರತೀಯ ವಾಣಿಜ್ಯ ಒಕ್ಕೂಟಗಳ ಕೇಂದ್ರದ ಕಾರ್ಯದರ್ಶಿ ಡಿ.ಡಿ. ರಮಾನಂದನ್ ತಿಳಿಸಿದ್ದಾರೆ. ಈ ವಿಷಯವಾಗಿ ಕಾರ್ಮಿಕ ಒಕ್ಕೂಟಗಳು ಈಗಾಗಲೇ ಕಳೆದ ತಿಂಗಳು ಆಡಳಿತದ ಜೊತೆ ಮೊದಲ ಸುತ್ತಿನ ಮಾತುಕತೆಗಳನ್ನು ನಡೆಸಲಿದ್ದಾರೆ.
ಕೋಲ್ ಇಂಡಿಯಾದ ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳ ಜೊತೆ ಈ ಹಿಂದೆ ನಡೆಸಿದ ಮಾತುಕತೆಗಳ ಫಲವಾಗಿ ಕಾರ್ಮಿಕರ ವೇತನದಲ್ಲಿ ಶೇ.25ರಿಂದ ಶೇ.20ರಷ್ಟು ಏರಿಕೆಯಾಗಿತ್ತು. ಆದರೆ ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಕೋಲ್ ಇಂಡಿಯಾ ಆಡಳಿತವು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ ಎಂದಿದೆ ಮತ್ತು ಎರಡೂ ಕಡೆಗಳಿಗೂ ಪೂರಕವಾದಂತಹ ಪರಿಹಾರಕ್ಕಾಗಿ ಎದುರು ನೋಡುತ್ತಿದೆ ಎಂದರು.





