ಬಿಬಿಎಂಪಿ ವ್ಯಾಪ್ತಿಯಲ್ಲಿ ಜನದಟ್ಟಣೆ ಸೇರಿದಂತೆ ಮಾರ್ಷಲ್‍ಗಳ ನಿಯೋಜನೆ: ಗೌರವ್ ಗುಪ್ತಾ

ಬೆಂಗಳೂರು, ಆ.18: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ 50ಕ್ಕೂ ಹೆಚ್ಚು ಮಾರ್ಷಲ್ ತಂಡಗಳನ್ನು ನಿಯೋಜಿಸಲಾಗಿದೆ. ಹಾಗೂ ಪೊಲೀಸ್ ಸಿಬ್ಬಂದಿಗಳ ಜೊತೆಗೂಡಿ ಜನದಟ್ಟಣೆಯನ್ನು ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಮಹಾಲಕ್ಷ್ಮಿ, ಗಣೇಶ, ಮೊಹರಂ ಸೇರಿದಂತೆ ಹಲವಾರು ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಸಾಮೂಹಿಕವಾಗಿ ಹಬ್ಬ ಆಚರಿಸದಂತೆ ಜಾಗ್ರತೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನಾಗರಿಕರು ಪ್ರಜ್ಞಾವಂತರಿದ್ದಾರೆ. ಈಗಾಗಲೇ ಒಂದು, ಎರಡನೇ ಕೋವಿಡ್ ಅಲೆಯಿಂದ ಏನೆಲ್ಲ ಸಮಸ್ಯೆಗಳಾಗಿವೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಮೂರನೇ ಅಲೆ ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ನಗರದಲ್ಲಿ ಶೇ.70ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಮೊದಲನೇ ಡೋಸ್ ಆಗಿದೆ. ಎರಡನೇ ಡೋಸ್ ಲಸಿಕೆಯು ನಡೆಯುತ್ತಿದೆ. ನಗರದ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಲಸಿಕೆಯನ್ನು ಪಡೆದುಕೊಳ್ಳಬೇಕು. ಆ ಮೂಲಕ ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಆ.23ರಿಂದ 9 ಮತ್ತು 10ನೇ ತರಗತಿಗಳು ಪ್ರಾರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಾಗೂ ಶಿಕ್ಷಕರು, ಶಿಕ್ಷಕೇತರರು ಹಾಗೂ ಶಾಲಾ ವಾಹನ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕೆಂದು ಅವರು ಹೇಳಿದ್ದಾರೆ.







