ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ನಿರ್ಧಾರ ಸೂಕ್ತವಲ್ಲ: ಜೆಡಿಎಸ್ ಮುಖಂಡ ಗಿರೀಶ್ ಕೆ.ನಾಶಿ

ಬೆಂಗಳೂರು, ಆ.18: ರಾಜ್ಯ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಜನರ ಆಶೋತ್ತರಗಳ ಈಡೇರಿಕೆಗೆ ಮುಂದಾಗದೇ ಬರೀ ಹೆಸರು ಬದಲಾವಣೆ ಮಾಡುವ ಮೂಲಕ ಕಾಲಹರಣ ಮಾಡುತ್ತಿದೆ. ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಶೂನ್ಯ ಎಂದು ಜೆಡಿಎಸ್ ಮುಖಂಡ ಗಿರೀಶ್ ಕೆ.ನಾಶಿ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಸಚಿವರ ಖಾತೆ ಕ್ಯಾತೆ ಇದರಲ್ಲೇ ಮುಳುಗಿದ್ದು, ರಾಜ್ಯದಲ್ಲಿ ಮಹಾಮಾರಿ ಕೋರೊನ ಸೋಂಕು ವ್ಯಾಪಕವಾಗಿ ಹರಡಿ ಲಕ್ಷಾಂತರ ಜನರು ಈಗಾಗಲೇ ಕೋವಿಡ್-19 ನಿಂದ ಅಸುನೀಗಿದ್ದಾರೆ. ಇದರ ಜೊತೆ ಈಗ 3ನೇ ಅಲೆ ಪ್ರಾರಂಭವಾಗಿದ್ದು, ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸಮರ್ಪಕ ರೀತಿಯಲ್ಲಿ ಲಸಿಕೆ ಸರಬರಾಜು ಇಲ್ಲದೆ ಅಲ್ಲಲ್ಲಿ ಜನರು ಪರದಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಇದನ್ನು ಸರಿಪಡಿಸಬೇಕು, ಇದೆಲ್ಲವನ್ನೂ ಬಿಟ್ಟು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ ಅನ್ನಪೂರ್ಣೇಶ್ವರಿ ಅಂತ ಹೆಸರಿಡಬೇಕು ಎಂದು ಹೇಳಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿರಾಗಾಂಧಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಿ ಅಂದಿನ ಸಂಸತ್ತಿನಲ್ಲಿ ತಮ್ಮ ಆಡಳಿತ ವೈಖರಿಯಿಂದ ಅಂದಿನ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಂದ ದುರ್ಗಾಮಾತೆ ಎಂದು ಕರೆಸಿಕೊಂಡಿದ್ದರು. ಇಂದು ಅದೇ ಅಟಲ್ ಬಿಹಾರಿ ವಾಜಪೇಯಿ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದ ಮುಖಂಡರು ಇಂದಿರಾಗಾಂಧಿ ಹೆಸರಿನ ಬಡವರ ದೀನದಲಿತರ ಒಂದು ಹೊತ್ತಿನ ಊಟ ನೀಡುವ ಕ್ಯಾಂಟೀನ್ ಹೆಸರು ಬದಲಾಯಿಸುವ ಮೂಲಕ ದೇಶದ ವೀರ ಮಹಿಳೆಗೆ ಅಪಮಾನ ಮಾಡುವ ರೀತಿ ನಡೆದುಕೊಳ್ಳುವುದು ಬಿಜೆಪಿ ಹಾಗೂ ಪಕ್ಷದ ಮುಖಂಡರಿಗೇ ಶೋಭೆ ತರುವುದಿಲ್ಲ ಎಂದು ಗಿರೀಶ್ ಕೆ ನಾಶಿ ಹೇಳಿದ್ದಾರೆ.
ಇದರ ಜೊತೆಗೆ ಮಹಾಲಕ್ಷ್ಮೀ ಲೇಔಟ್ ಶಾಸಕ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ತಮ್ಮ ಕ್ಷೇತ್ರದಲ್ಲಿ ಸ್ವತಃ ತಾವೇ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿ ಇಂದಿರಾ ಗಾಂಧಿ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಆದರೆ, ಈಗ ಬಿಜೆಪಿ ಪಕ್ಷಕ್ಕೆ ಬಂದು ಸಚಿವರಾಗಿ ಆಯ್ಕೆಯಾದ ನಂತರ ತಮ್ಮ ವರಸೆ ಬದಲಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.







