ತಾಳೆ ಬೆಳೆಗೆ ಪ್ರೋತ್ಸಾಹದ ಉದ್ದೇಶದ 11,040 ಕೋಟಿ. ಮೊತ್ತದ ಯೋಜನೆಗೆ ಸಂಪುಟ ಅನುಮೋದನೆ

ಹೊಸದಿಲ್ಲಿ, ಆ.18: ತಾಳೆ ಮರದ ಕೃಷಿಗೆ ಪ್ರೋತ್ಸಾಹ ನೀಡಿ, ದೇಶೀಯ ಖಾದ್ಯ ಪಾಮ್ ಆಯಿಲ್(ತಾಳೆ ಎಣ್ಣೆ) ಉತ್ಪಾದನೆ ಹೆಚ್ಚಿಸುವ ಉದ್ದೇಶದ 11,040 ಕೋಟಿ ರೂ. ಮೊತ್ತದ ರಾಷ್ಟ್ರೀಯ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಈಗ ದೇಶದಲ್ಲಿ ಪಾಮ್ ಆಯಿಲ್ ಆಮದು ಪ್ರಮಾಣ ಹೆಚ್ಚಿದ್ದು ಇದನ್ನು ಮುಂದಿನ 5 ವರ್ಷದೊಳಗೆ ಕನಿಷ್ಟ ಪ್ರಮಾಣಕ್ಕೆ ಇಳಿಸುವ ‘ ದಿ ನ್ಯಾಷನಲ್ ಮಿಷನ್ ಆನ್ ಎಡಿಬಲ್ ಆಯಿಲ್ಸ್-ಆಯಿಲ್ ಪಾಮ್(ಎನ್‌ಎಮ್‌ಇಒ-ಒಪಿ)ಗೆ ಸಂಪುಟದ ಅನುಮೋದನೆ ದೊರಕಿದೆ. ಈ ಯೋಜನೆಯ ಬಗ್ಗೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾವಿಸಿದ್ದರು.
ಈಶಾನ್ಯ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ತಾಳೆ ಬೆಳೆ ಬೆಳೆಯುವ ಪ್ರದೇಶವನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಯೋಜನೆಯಡಿ ತಾಳೆ ಬೆಳೆಗಾರರಿಗೆ ಸರಕಾರ ಕನಿಷ್ಟ ಬೆಲೆ ಖಾತರಿಗೊಳಿಸಲಿದೆ. ತಾಳೆ ಬೆಳೆಗಾರರಿಗೆ ಹೆಕ್ಟೇರ್‌ಗೆ ನೀಡಲಾಗುತ್ತಿದ್ದ ಸಹಾಯಧನವನ್ನು 12 ಸಾವಿರ ರೂ.ನಿಂದ 29 ಸಾವಿರ ರೂ.ಗೆ ಹೆಚ್ಚಿಸಲಾಗಿದೆ . ತಾಳೆ ಬೆಳೆ ಕೃಷಿಗೆ ಅಗತ್ಯವಿರುವ ಸಾಧನಗಳ ಖರೀದಿಗೆ 15 ಹೆಕ್ಟೇರ್‌ಗೆ 100 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.







