ಉಡುಪಿ: ಕೋವಿಡ್ ಗೆ ಇಬ್ಬರು ಬಲಿ, 161 ಮಂದಿಯಲ್ಲಿ ಕೊರೋನ ಪಾಸಿಟಿವ್
![ಉಡುಪಿ: ಕೋವಿಡ್ ಗೆ ಇಬ್ಬರು ಬಲಿ, 161 ಮಂದಿಯಲ್ಲಿ ಕೊರೋನ ಪಾಸಿಟಿವ್ ಉಡುಪಿ: ಕೋವಿಡ್ ಗೆ ಇಬ್ಬರು ಬಲಿ, 161 ಮಂದಿಯಲ್ಲಿ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2021/08/19/303309-1629386383.jpg)
ಉಡುಪಿ, ಆ.19: ಜಿಲ್ಲೆಯಲ್ಲಿ ಗುರುವಾರ ಸಹ ಇಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ದಿನದಲ್ಲಿ ಹೊಸದಾಗಿ ಸೋಂಕು ಪತ್ತೆಯಾದ ವರ ಸಂಖ್ಯೆ 161ಕ್ಕೇರಿದರೆ, 127 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1325ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಕುಂದಾಪುರದ 44ರ ಹರೆಯದ ಯುವಕ ಹಾಗೂ ಕಾರ್ಕಳದ 66 ವರ್ಷ ಪ್ರಾಯದ ಹಿರಿಯ ನಾಗರಿಕರು ಸೋಂಕಿನ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾರೆ. ಇಬ್ಬರೂ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾಕ್ಕಾಗಿ ಆ.11 ಮತ್ತು 16ಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ವ್ಯಕ್ತಿ ನಿನ್ನೆ ಮೃತಪಟ್ಟರೆ ಯುವಕ ಇಂದು ಸಾವನ್ನಪ್ಪಿದರು. ಇವರಿಬ್ಬರ ನಿಧನದಿಂದ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾ ದವರ ಸಂಖ್ಯೆ 438ಕ್ಕೇರಿದೆ.
ಗುರುವಾರ ಕೊರೋನ ಸೋಂಕು ದೃಢಪಟ್ಟ 161 ಮಂದಿಯಲ್ಲಿ 80 ಮಂದಿ ಪುರುಷರು ಹಾಗೂ 81 ಮಂದಿ ಮಹಿಳೆಯರು. ಪಾಸಿಟಿವ್ ಬಂದವ ರಲ್ಲಿ 83 ಮಂದಿ ಉಡುಪಿ ತಾಲೂಕು, 28 ಮಂದಿ ಕುಂದಾಪುರ, 49 ಮಂದಿ ಕಾರ್ಕಳ ತಾಲೂಕಿನವರಾದರೆ ಹಾಗೂ ಒಬ್ಬರು ಹೊರ ಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 27 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 134 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಬುದವಾರ 127 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 70,542ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 7075 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 72,305ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,71,710 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಹೊಸದಾಗಿ ಯಾರಲ್ಲೂ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿಲ್ಲ. ಸದ್ಯ ಹೊರಜಿಲ್ಲೆಗಳ ನಾಲ್ವರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
4309 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಗುರುವಾರ 4309 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 2786 ಮಂದಿಗೆ ಮೊದಲ ಡೋಸ್ ಹಾಗೂ 1523 ಮಂದಿಗೆ ಎರಡನೇ ಡೋಸ್ನ್ನು ನೀಡಲಾಗಿದೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
18ರಿಂದ 44ವರ್ಷದೊಳಗಿನ 1821 ಮಂದಿ ಮೊದಲ ಹಾಗೂ 1166 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 965 ಮಂದಿಗೆ ಮೊದಲ ಹಾಗೂ 357 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆಯಾಗಿ ಜಿಲ್ಲೆಯ 5,96,103 ಮಂದಿಗೆ ಮೊದಲ ಡೋಸ್ ಹಾಗೂ 2,19,586 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.