‘‘ತಾಲಿಬಾನಿಗಳು ಗುರುದ್ವಾರಕ್ಕೆ ಆಗಮಿಸಿ ಹಿಂದೂ, ಸಿಖ್ಖರಿಗೆ ಸುರಕ್ಷೆಯ ಭರವಸೆ ನೀಡಿದ್ದಾರೆ’’: ಅಕಾಲಿ ನಾಯಕ

ಹೊಸದಿಲ್ಲಿ, ಆ. 19: ಅಫ್ಘಾನಿಸ್ಥಾನದಲ್ಲಿ ಸಿಲುಕಿಕೊಂಡ ಸಿಖ್ಖರು ಹಾಗೂ ಹಿಂದೂಗಳಿಗೆ ಸುರಕ್ಷತೆಯ ಭರವಸೆ ನೀಡಲಾಗಿದೆ. ಅವರು ಆಂತಕಪಪಟ್ಟಕೊಳ್ಳಬೇಕಾಗಿಲ್ಲ ಎಂದು ಕಾಬೂಲ್‌ನ ಗುರುದ್ವಾರದ ಮುಖ್ಯಸ್ಥರು ನೀಡಿದ ಹೇಳಿಕೆಯ ವೀಡಿಯೊವನ್ನು ತಾಲಿಬಾನ್‌ನ ವಕ್ತಾರ ಬುಧವಾರ ರಾತ್ರಿ ಹಂಚಿಕೊಂಡಿದ್ದಾರೆ.
ಅಲ್ ಜಝೀರ ವರದಿಯ ಭಾಗವಾಗಿ ಈ ವೀಡಿಯೊ ಕಾಣಿಸಿಕೊಂಡಿತ್ತು. ಇದನ್ನು ಅಫ್ಘಾನಿಸ್ಥಾನದ ರಾಜಕೀಯ ಕಚೇರಿಯ ವಕ್ತಾರ ಎಂ. ನಯೀಮ್ ಟ್ವೀಟ್ ಮಾಡಿದ್ದರು. ಈ ವೀಡಿಯೊವನ್ನು ದಿಲ್ಲಿಯ ಸಿಖ್ಖ್ ಗುರುದ್ವಾರ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅಕಾಲಿ ದಳದ ಮಂಜಿಂದರ್ ಸಿಂಗ್ ಸಿರ್ಸಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತಾನು ಕಾಬೂಲ್ ಗುರುದ್ವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ತಾಲಿಬಾನ್ ನಾಯಕರು ಹಿಂದೂ ಹಾಗೂ ಸಿಖ್ಖರನ್ನು ಭೇಟಿಯಾಗಿದ್ದಾರೆ. ಅವರ ಸುರಕ್ಷತೆಗೆ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. 76 ಸೆಕೆಂಡ್‌ಗಳ ವೀಡಿಯೊದಲ್ಲಿ ತಾಲಿಬಾನ್ ಸದಸ್ಯರಂತೆ ಕಾಣುವ ಕೆಲವು ಜನರು ಸೇರಿದಂತೆ ಹಲವರು ಗುರುದ್ವಾರಕ್ಕೆ ಭೇಟಿ ನೀಡಿರುವುದು ಹಾಗೂ ಗುರುದ್ವಾರದಲ್ಲಿ ಆಶ್ರಯ ಪಡೆದುಕೊಂಡ ಸಿಖ್ಖರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿದೆ. ಈ ವೀಡಿಯೊ ಗುರುದ್ವಾರ ಅಧ್ಯಕ್ಷರ ಹೇಳಿಕೆ(ಸ್ಥಳೀಯ ಭಾಷೆಯಲ್ಲಿ)ಯನ್ನು ಕೂಡ ಒಳಗೊಂಡಿದೆ.





