ಟಿಬೆಟ್ ಸ್ಥಾಪನಾ ದಿನಾಚರಣೆ : ಕಮ್ಯುನಿಸ್ಟ್ ಆಳ್ವಿಕೆ ಒಪ್ಪಿಕೊಳ್ಳುವಂತೆ ಚೀನಾದ ಕರೆ
ಬೀಜಿಂಗ್, ಆ.18: ವಿಶ್ವದ ಅತ್ಯಂತ ಎತ್ತರದ ಪ್ರದೇಶದಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶ ಸ್ಥಾಪನೆಯ 70ನೇ ವರ್ಷಾಚರಣೆಯ ಸಂದರ್ಭ , ಈ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಸ್ಥಿರತೆಗಾಗಿ ಕಮ್ಯುನಿಸ್ಟ್ ಆಳ್ವಿಕೆಯನ್ನು ಒಪ್ಪಿಕೊಳ್ಳುವಂತೆ ಚೀನಾದ ಆಡಳಿತ ಕರೆ ನೀಡಿದೆ.
ಟಿಬೆಟ್‌ನ ಲ್ಹಾಸಾದಲ್ಲಿ ದಲಾಯಿ ಲಾಮಾಗಳು ಈ ಹಿಂದೆ ನೆಲೆಸಿದ್ದ, ಬೌಧ್ದರ ಪವಿತ್ರ ಯಾತ್ರಾಸ್ಥಳ ಪೊಟಾಲಾ ಅರಮನೆಯ ಕೆಳಗಡೆ ನಡೆದ ಸ್ಥಾಪನಾ ದಿನಾಚರಣೆಯಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಂಡಿದ್ದರು. ದೇಶದಾದ್ಯಂತ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ, ಪ್ರೇಕ್ಷಕರ ಹಿಂಭಾಗದಲ್ಲಿ ಸ್ಥಾಪಿಸಿದ್ದ, 4 ಮಹಡಿಗಳ ಕಟ್ಟಡದಷ್ಟು ಎತ್ತರವಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಮೆ ಗಮನ ಸೆಳೆಯುತ್ತಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಮತ್ತು ಸಮಾಜವಾದದ ಮೂಲಕ ಮಾತ್ರ ಟಿಬೆಟ್ ಪ್ರಗತಿ ಹೊಂದಿ ಸಮೃದ್ಧವಾಗಬಹುದು ಎಂದು ಈ ಸಂದರ್ಭ ವಾಂಗ್ ಯಾಂಗ್ ಹೇಳಿದರು. ಎಲ್ಲಾ ಪಕ್ಷಗಳು ಹಾಗೂ ಜನಾಂಗದವರನ್ನು ಕಮ್ಯುನಿಸ್ಟ್ ಪಕ್ಷದ ಆಡಳಿತದಡಿ ಒಗ್ಗೂಡಿಸುವ ಉದ್ದೇಶದಿಂದ ರಚನೆಯಾಗಿರುವ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿದ್ದಾರೆ ವಾಂಗ್‌ಯಾಂಗ್. ಕಾರ್ಯಕ್ರಮದ ಸಂದರ್ಭ, ಟಿಬೆಟ್‌ನ ಬೌದ್ಧ ಧರ್ಮೀಯರ ಮೇಲೆ ಕಮ್ಯುನಿಸ್ಟ್ ಪಕ್ಷದ ಅಧಿಕಾರವನ್ನು ಸಂಕೇತಿಸುವ ನಿಟ್ಟಿನಲ್ಲಿ , ಪಂಚಮ್ ಲಾಮಾಗೆ ಸ್ಮರಣಿಕೆಯನ್ನು ವಾಂಗ್‌ಯಾಂಗ್ ಹಸ್ತಾಂತರಿಸಿದರು.







