ಅಮೆರಿಕದ ನೌಕಾ ಸೇನೆ ಕಾರ್ಯಕ್ರಮಕ್ಕೆ 2ನೇ ಬಾರಿ ಪ್ರತಿಭಟನೆ ಸಲ್ಲಿಸಿದ ಚೀನಾ
ಬೀಜಿಂಗ್, ಆ.20: ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕೆಗಳು ತನ್ನ ಸಮುದ್ರವ್ಯಾಪ್ತಿ ಪ್ರವೇಶಿಸಿದ್ದು ಈ ಬಗ್ಗೆ ಅಮೆರಿಕಕ್ಕೆ 2 ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಚೀನಾ ಗುರುವಾರ ಹೇಳಿದೆ.
ದಕ್ಷಿಣ ಚೀನಾ ಸಮುದ್ರದ ಪ್ಯಾರಸೆಲ್ ದ್ವೀಪಸಮೂಹದ ಬಳಿ ಅಮೆರಿಕದ ಕ್ಷಿಪಣಿನಾಶಕ ನೌಕೆ ಕರ್ಟಿಸ್ ವಿಲ್ಬರ್ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದನ್ನು ಪತ್ತೆಹಚ್ಚಿದ ಚೀನಾದ ಅಧಿಕಾರಿಗಳು ಅದನ್ನು ಸುತ್ತುವರಿದು ಹಿಂತೆರಳುವಂತೆ ಸೂಚಿಸಿವೆ ಎಂದು ಚೀನಾ ನೌಕಾಪಡೆಯ ದಕ್ಷಿಣ ಕಮಾಂಡ್ ವಿಭಾಗದ ಹೇಳಿಕೆ ತಿಳಿಸಿದೆ.
ಅಮೆರಿಕದ ಉಪಕ್ರಮ ಪ್ರಾದೇಶಿಕ ಭದ್ರತೆಯ ಮೇಲಿನ ಕೃತಕ ಅಪಾಯವನ್ನು ಹೆಚ್ಚಿಸಿದ್ದು ಇದು ತಪ್ಪುತಿಳುವಳಿಕೆ, ತಪ್ಪು ತೀರ್ಮಾನ ಮತ್ತು ಸಮುದ್ರ ಪ್ರದೇಶದಲ್ಲಿ ಅನಾಹುತಗಳಿಗೆ ಕಾರಣವಾಗಬಹುದು. ಚೀನಾದ ಪಡೆಗಳು ದಕ್ಷಿಣ ಚೀನಾ ಸಮುದ್ರವ್ಯಾಪ್ತಿಯಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಬದ್ಧವಾಗಿರುವ ಜೊತೆಗೆ, ಈ ಪ್ರದೇಶದ ಮೇಲಿನ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಕಟಿಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಸಾರ್ವಭೌಮತೆ ಸಾಧಿಸುವುದನ್ನು ಅಮೆರಿಕ ಒಪ್ಪುತ್ತಿಲ್ಲ ಮತ್ತು ಈ ಭಾಗದಲ್ಲಿ ಯಾವುದೇ ದೇಶದ ನೌಕೆಗಳು ಪ್ರಯಾಣಿಸುವ ಹಕ್ಕು ಹೊಂದಿದೆ ಎಂದು ಪ್ರತಿಪಾದಿಸುತ್ತಿದೆ.







