'ದೇಶದ್ರೋಹʼ ಕಾನೂನು ರದ್ದುಪಡಿಸಲು ನೇತಾಜಿ ಬಂಧು ಸುಗತ ಬೋಸ್ ಆಗ್ರಹ

ಫೋಟೊ ಕೃಪೆ: wikipedia
ಹೊಸದಿಲ್ಲಿ, ಆ.20: ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಸರಕಾರವು ಬಳಸುತ್ತಿರುವ ದೇಶದ್ರೋಹ ಕಾನೂನಿನಂತಹ ವಸಾಹತುಶಾಹಿ ಕಾಲದ ಕಾನೂನುಗಳನ್ನು ರದ್ದುಪಡಿಸಬೇಕೆಂದು ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಸೋದರಮೊಮ್ಮಗ ಸುಗತ ಬೋಸ್ ಆಗ್ರಹಿಸಿದ್ದಾರೆ.
ನೇತಾಜಿ ಸುಭಾಶ್ಚಂದ್ರ ಭೋಸ್, ಮಹಾತ್ಮಾಗಾಂಧೀಜಿ ಹಾಗೂ ಬಾಲ ಗಂಗಾಧರ ತಿಲಕ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಮೌನವಾಗಿಸಲು ವಸಾಹತುಶಾಹಿ ಬ್ರಿಟಿಶ್ ಸರಕಾರವು ದೇಶದ್ರೋಹಿ ಕಾನೂನುಗಳನ್ನು ಬಳಸಿತ್ತು ಎಂದು ಸುಗತ ಬೋಸ್ ತಿಳಿಸಿದ್ದಾರೆ.
ನಾವು ನಮ್ಮ ಪ್ರಜಾಪ್ರಭುತ್ವದ ಸ್ತಂಭಗಳನ್ನು ಬಲಪಡಿಸಬೇಕಾಗಿದೆ ಹಾಗೂ ಇಂತಹ ಅಕ್ರಮ ವಸಾಹತುಶಾಹಿ ಕಾಲದ ಕಾನೂನುಗಳನ್ನು ರದ್ದುಪಡಿಸಬೇಕಾಗಿದೆ. ಇಂತಹ ಕೆಲವು ಪ್ರಕರಣಗಳಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಕೂಡಾ ಅಮಾನತಿನಲ್ಲಿಡುವುದರ ಬಗ್ಗೆಯೂ ನಾನು ಆತಂಕಗೊಂಡಿದ್ದೇನೆ’’ ಎಂದವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ತಾನು ಗುಣಾತ್ಮಕ ಬದಲಾವಣೆಯನ್ನು ತರಲು ಬಯಸಿದ್ದೇನೆಂದು ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ಇತ್ತೀಚೆಗೆ ದೇಶದ್ರೋಹದ ಕಾನೂನಿನ ಅವಶ್ಯಕತೆಯನ್ನು ಪ್ರಶ್ನಿಸಿರುವುದಾಗಿ ಅವರು ತಿಳಿಸಿದರು.
ಬ್ರಿಟನ್ ನ ಹಾರ್ವರ್ಡ್ ವಿವಿಯಲ್ಲಿ ಇತಿಹಾಸದ ಪ್ರೊಫೆಸರ್ ಆಗಿರುವ ಸುಗತ ಬೋಸ್ ಅವರು ನೇತಾಜಿ ಸಂಶೋಧನಾ ಬ್ಯುರೋದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಜಾಧವ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಸುಗತ ಭೋಸ್ ಅವರು 2019ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.







