ಚತ್ತೀಸ್ಗಢ: ನಕ್ಸಲ್ ದಾಳಿಗೆ ಐಟಿಬಿಪಿಯ ಇಬ್ಬರು ಯೋಧರು ಹುತಾತ್ಮ
ನಾರಾಯಣಪುರ, ಆ.20: ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ನಕ್ಸಲ್ ದಾಳಿಯೊಂದರಲ್ಲಿ ಇಂಡೊ ಟಿಬೆಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ)ಯ ಸಹಾಯಕ ಕಮಾಂಡೆಂಟ್ ಹಾಗೂ ಓರ್ವ ಸಹದ್ಯೋಗಿ ವೀರಮರಣವನ್ನಪ್ಪಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೋಟೆ ಡೊಂಗಾರ್ ಪೊಲೀಸ್ ಠಾಣಾ ವ್ಯಾಪ್ತಿಯ 45ನೇ ಬೆಟಾಲಿಯನ್ ಗೆ ಸೇರಿದ ಕಾಡೆಮೆಟಾ ಶಿಬಿರದ ಸಮೀಪ ಮಧ್ಯಾಹ್ನ 12:10ರ ಆಸುಪಾಸಿನಲ್ಲಿ ಈ ಘಟನೆ ನಡೆದಿದೆಯೆಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರೀಕ್ಷಕ ಸುಂದರ್ ರಾಜ್ ಪಿ.ತಿಳಿಸಿದ್ದಾರೆ.
ಕಾಡಮೆಟಾ ಶಿಬಿದಿಂದ ಸುಮಾರು 600 ಮೀಟರ್ ದೂರದಲ್ಲಿ ಐಟಿಬಿಪಿಯ 45ನೇ ಬೆಟಾಲಿಯನ್ನ ಯೋಧರ ಮೇಲೆ ನಕ್ಸಲ್ ಉಗ್ರರ ಸಣ್ಣ ತಂಡವೊಂದು ಹಠಾತ್ ಗುಂಡಿನ ದಾಳಿ ನಡೆಸಿತೆಂದು ಅವರು ಹೇಳಿದ್ದಾರೆ.ದಾಳಿಯಲ್ಲಿ ಐಟಿಬಿಪಿಯ 45ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್ ಸುಧಾಕರ್ ಶಿಂಧೆ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಗುರುಮುಖ್ ಸಿಂಗ್ ಸಾವನ್ನಪ್ಪಿದ್ದಾರೆಂದು ಐಜಿ ತಿಳಿಸಿದ್ದಾರೆ.
ದಾಳಿಯ ಬಳಿಕ ನಕ್ಸಲರು, ಭದ್ರತಾ ಯೋಧರ ಎಕೆ-47 ರೈಫಲ್ಗಳು, ಬುಲೆಟ್ ಪ್ರೂಫ್ ಜಾಕೆಟ್ ಗಳು ಹಾಗೂ ವೈರ್ಲೆಸ್ ಸೆಟ್ ಕಿತ್ತುಕೊಂಡು ಪರಾರಿಯಾಗಿದ್ದಾರೆಂದು ಅವರು ಹೇಳಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ಹೆಚ್ಚುವರಿ ಭದ್ರತಾಸಿಬ್ಬಂದಿ ಧಾವಿಸಿದ್ದು, ಸಾವನ್ನಪ್ಪಿದ ಯೋಧರ ಮೃತದೇಹಗಳ ತೆರವುಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.





