ಆಮ್ಲಜನಕದ ಕೊರತೆಯಿಂದ ಸಾವಿನ ಪ್ರಕರಣ: ತನಿಖಾ ಸಮಿತಿಯ ನೇಮಕ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ
ಹೊಸದಿಲ್ಲಿ, ಆ.20: ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳು ಸಾವನ್ನಪ್ಪಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಬೇಕೆಂಬ ದಿಲ್ಲಿ ಸರಕಾರದ ಪ್ರಸ್ತಾವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಜಾಜ್ ಮತ್ತೊಮ್ಮೆ ತಿರಸ್ಕರಿಸಿದ್ದಾರೆಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶುಕ್ರವಾರ ತಿಳಿಸಿದ್ದಾರೆ.
ಎಪ್ರಿಲ್ ಹಾಗೂ ಮೇನಲ್ಲಿ ಕೋವಿಡ್-19ನ ಎರಡನೆ ಅಲೆಯು ವ್ಯಾಪಕವಾಗಿದ್ದಾಗ ದಿಲ್ಲಿಯು ವೈದ್ಯಕೀಯ ಆಮ್ಲಜನಕದ ತೀವ್ರ ಬಿಕ್ಕಟ್ಟನ್ನು ಎದುರಿಸಿದ್ದನ್ನು ಮತ್ತು ಆಮ್ಲಜನಕದ ಕೊರತೆಯಿಂದಾಗಿ ಜನರು ಸಾವನ್ನಪ್ಪಿದ್ದಾರೆಂಬುದನ್ನು ಕೂಡಾ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವೆಂದು ಸಿಸೋಡಿಯಾ ಅವರು ಆನ್ಲೈನ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘‘ಆಕ್ಸಿಜನ್ ಕೊರತೆಯಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ಸಮಿತಿಯೊಂದ್ನು ರಚಿಸುವಂತೆ ದಿಲ್ಲಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರು ಅದರ ಅಗತ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ’’ ಎಂದವರು ಹೇಳಿದ್ದಾರೆ.
ಒಂದೆಡೆ ಕೇಂದ್ರ ಸರಕಾರವು ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂಬುದನ್ನು ತಿಳಿಸುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳನ್ನು ಕೇಳುತ್ತಿದ್ದರೆ, ಇನ್ನೊಂದೆಡೆ ಅದು, ಈ ರೀತಿಯಾಗಿ ಸಂಭವಿಸಿದ ಸಾವುಗಳ ಬಗ್ಗೆ ತನಿಖೆ ನಡೆಸಲು ನಮಗೆ ಅನುಮತಿ ನೀಡುತ್ತಿಲ್ಲ. ಹೀಗಿರುವಾಗ ರಾಜ್ಯ ಸರಕಾರಗಳು ಏನು ತಾನೇ ಹೇಳಲು ಸಾಧ್ಯವೆಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.
ಎಪ್ರಿಲ್ ಹಾಗೂ ಮೇನಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಆಗಿದ್ದ ಕಳಪೆ ನಿರ್ವಹಣೆಗೆ ಕೇಂದ್ರ ಸರಕಾರವು ಸಂಪೂರ್ಣ ಹೊಣೆಗಾರನಾಗಿದೆ ಹಾಗೂ ಇದೊಂದು ಉದ್ದೇಶಪೂರ್ವಕ ಕೃತ್ಯವೇ ಅಥವಾ ಪ್ರಮಾದವೇ ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಆಗ್ರಹಿಸಿದ್ದಾರೆ.
ಆಮ್ಲಜನಕದ ಬಿಕ್ಕಟ್ಟಿನಲ್ಲಿ ತಾನೇ ಹೊಣೆಗಾರನೆಂದು ಕೇಂದ್ರ ಸರಕಾರವು ಒಪ್ಪಿಕೊಳ್ಳಬೇಕು ಎಂದು ಸಿಸೋಡಿಯಾ ಆಗ್ರಹಿಸಿದ್ದು, ಇದರ ನೋವನ್ನು ಇಡೀ ದೇಶ ಸಹಿಸಿಕೊಳ್ಳಬೇಕಾಗಿ ಬಂದಿದೆ ಎಂದರು.
ಆಮ್ಲಜನಕದ ಕೊರತೆಯಿಂದಾಗಿ 21ನೇ ಶತಮಾನದಲ್ಲಿಯೂ ಜನರು ಸಾಯುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಮಾತ್ರ ಆ ಬಗ್ಗೆ ತನಿಖೆ ಬೇಡವೆಂದು ಹೇಳುತ್ತಿದೆ ಯಾಕೆ . ಇದ್ಯಾಕೆ ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.
ಕೋವಿಡ್19 ಎರಡನೆ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದೆಯೆನ್ನಲಾದ ಸಾವುಗಳ ಬಗ್ಗೆ ತನಿಖೆ ನಡೆಸಲು ದಿಲ್ಲಿ ಸರಕಾರವು ಜೂನ್ನಲ್ಲಿ ನಾಲ್ವರು ಸದಸ್ಯರ ತಜ್ಞ ಸಮಿತಿಯೊಂದನ್ನು ರಚಿಸಿತ್ತು.







