ಕಾನೂನಿನಲ್ಲಿ ಅವಕಾಶವಿದೆ ಎಂಬ ಮಾತ್ರಕ್ಕೆ ʼಬಂಧಿಸುವುದುʼ ಸರಿಯಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಆ.20: ಕಾನೂನಿನಲ್ಲಿ ಬಂಧನಕ್ಕೆ ಅವಕಾಶವಿದೆ ಎಂಬ ಮಾತ್ರಕ್ಕೆ ಈ ಅಧಿಕಾರವನ್ನು ಸರಕಾರ ವೈಯಕ್ತಿಕ ಸ್ವಾತಂತ್ರ್ಯ ಹತ್ತಿಕ್ಕಲು ಮನಬಂದಂತೆ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವೈಯಕ್ತಿಕ ಸ್ವಾತಂತ್ರ್ಯ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿದ ಒಂದು ಪ್ರಮುಖ ವಿಷಯವಾಗಿದೆ. ಕಸ್ಟಡಿಯಲ್ಲಿ ವಿಚಾರಣೆಯ ಅಗತ್ಯವಿದ್ದಾಗ ಅಥವಾ ಘೋರ ಅಪರಾಧ ಕೃತ್ಯದ ಸಂದರ್ಭದಲ್ಲಿ ಮಾತ್ರ ಆರೋಪಿಯನ್ನು ಬಂಧಿಸುವ ಅಗತ್ಯ ಬರುತ್ತದೆ. ಆರೋಪಿ ತಲೆಮರೆಸಿಕೊಳ್ಳುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಸಾಧ್ಯತೆ ಇರುವಾಗ ಬಂಧನದ ಅಗತ್ಯವಿದೆ. ಕಾನೂನಿನಲ್ಲಿ ಅವಕಾಶವಿದೆ ಎಂಬ ಮಾತ್ರಕ್ಕೆ ಬಂಧಿಸುವುದು ಸರಿಯಲ್ಲ ಎಂದು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠ ಹೇಳಿದೆ.
ಬಂಧಿಸುವ ಅಧಿಕಾರದ ಅಸ್ತಿತ್ವ ಮತ್ತು ಅದನ್ನು ಪ್ರಯೋಗಿಸುವುದರ ಅಗತ್ಯದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಬಂಧನ ವಾಡಿಕೆಯಾದರೆ ಅದರಿಂದ ವ್ಯಕ್ತಿಯ ಘನತೆ ಮತ್ತು ಆತ್ಮಗೌರವಕ್ಕೆ ಅಪಾರ ಹಾನಿಯಾಗುತ್ತದೆ. ಆರೋಪಿ ತನಿಖೆಗೆ ಸಹಕರಿಸಿದರೆ ಆಗ ಆರೋಪಿಯನ್ನು ಬಂಧಿಸಬೇಕೆಂಬ ಒತ್ತಾಯದ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.
ಉತ್ತರಪ್ರದೇಶ ಸರಕಾರ 2007ರಲ್ಲಿ ಜಾರಿಗೆ ತಂದಿದ್ದ ಉದ್ಯಾನವನ ಮತ್ತು ಮ್ಯೂಸಿಯಂ ನಿರ್ಮಾಣ ಯೋಜನೆಯ ಕಾಮಗಾರಿಯಲ್ಲಿ ಮಾಜಿ ಸಚಿವರು ಹಾಗೂ ಉನ್ನತ ಅಧಿಕಾರಿಗಳ ನೆರವಿನಿಂದ ಸರಕಾರಕ್ಕೆ 14,000 ಕೋಟಿ ರೂ. ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ಸಿದ್ದಾರ್ಥ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿ ಜಾಮೀನು ಮಂಜೂರುಗೊಳಿಸಿದೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು.







