3.86 ಕೋಟಿ ಜನತೆ 2ನೇ ಡೋಸ್ ಲಸಿಕೆ ಸಕಾಲದಲ್ಲಿ ಪಡೆದಿಲ್ಲ: ಸರಕಾರ

ಹೊಸದಿಲ್ಲಿ, ಆ.20: ಕೊರೋನ ಸೋಂಕಿನ ವಿರುದ್ಧದ ಎರಡೂ ಡೋಸ್ ಲಸಿಕೆ ಪಡೆದರೆ ಮಾತ್ರ ಸಂಪೂರ್ಣ ಪ್ರಯೋಜನ ಪಡೆಯಬಹುದು. ಆದರೆ 3.86 ಕೋಟಿಗೂ ಅಧಿಕ ಜನ ನಿಗದಿತ ಅವಧಿಯೊಳಗೆ 2ನೇ ಡೋಸ್ ಲಸಿಕೆ ಪಡೆದಿಲ್ಲ ಎಂದು ಸರಕಾರ ಹೇಳಿದೆ. ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದು, ನಿಗದಿತ ಅವಧಿಯೊಳಗೆ 2ನೇ ಡೋಸ್ ಪಡೆಯದವರ ಬಗ್ಗೆ ಮಾಹಿತಿ ಕೋರಿ ಸಾಮಾಜಿಕ ಕಾರ್ಯಕರ್ತ ರಮಣ್ ಶರ್ಮ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರಸರಕಾರ ಈ ಉತ್ತರ ನೀಡಿದೆ.
ಕೋವಿಶೀಲ್ಡ್ ನ 2 ನೇ ಲಸಿಕೆಯನ್ನು 84ರಿಂದ 112 ದಿನಗಳ ಬಳಿಕ, ಕೊವ್ಯಾಕ್ಸಿನ್ ನ 2ನೇ ಲಸಿಕೆಯನ್ನು 28-42 ದಿನಗಳ ಬಳಿಕ ಪಡೆಯಬೇಕು. ಆದರೆ ನಿಗದಿತ ಅವಧಿಯೊಳಗೆ ಕೋವಿಶೀಲ್ಡ್ ನ 2ನೇ ಡೋಸ್ ಲಸಿಕೆ ಪಡೆಯದವರ ಒಟ್ಟು ಸಂಖ್ಯೆ 3,40,72,993(ಆಗಸ್ಟ್ 17ರವರೆಗೆ), ಕೊವ್ಯಾಕ್ಸಿನ್ ನ 2ನೇ ಡೋಸ್ ಪಡೆಯದವರ ಸಂಖ್ಯೆ 46,78,406 ಎಂದು ಆರೋಗ್ಯ ಇಲಾಖೆಯ ಕೋವಿಡ್ ಲಸಿಕೆ ವ್ಯವಸ್ಥಾಪನ ವಿಭಾಗ ಉತ್ತರಿಸಿದೆ.
ಪ್ರಥಮ ಡೋಸ್ ಲಸಿಕೆ ಪಡೆದವರು ನಿಗದಿತ ಅವಧಿಯೊಳಗೆ 2ನೇ ಡೋಸ್ ಲಸಿಕೆ ಪಡೆಯಲು ಸೂಚಿಸಲಾಗಿದೆ. ಆದರೆ ನಿಗದಿತ ಅವಧಿಯಲ್ಲಿ 2ನೇ ಡೋಸ್ ಪಡೆಯದವರು ಮತ್ತೆ ಮೊದಲ ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿಲ್ಲ ಎಂದು ಸರಕಾರದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ.





