ಚಿನ್ನದ ವ್ಯಾಪಾರಿಗಳಿಂದ ಆಗಸ್ಟ್ 23ರಂದು ಸಾಂಕೇತಿಕ ಮುಷ್ಕರ
ಹೊಸದಿಲ್ಲಿ, ಆ.20: ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಗುರುತನ್ನು ಕಡ್ಡಾಯಗೊಳಿಸುವುದನ್ನು ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಜಾರಿಗೊಳಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಆಭರಣ ವ್ಯಾಪಾರಿಗಳು ಆಗಸ್ಟ್ 23ರಂದು ಸಾಂಕೇತಿಕ ಮುಷ್ಕರ ನಡೆಸಲಿದ್ದಾರೆ.
ದೇಶಾದ್ಯಂತದ ರತ್ನ ಹಾಗೂ ಜ್ಯುವೆಲ್ಲರಿ ಕೈಗಾರಿಕೆಯ ಎಲ್ಲಾ ನಾಲ್ಕು ವಲಯಗಳಿಗೆ ಸೇರಿದ 350 ಆಭರಣ ವ್ಯಾಪಾರಿಗಳ ಸಂಘಗಳು ಹಾಗೂ ಒಕ್ಕೂಟಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ಅಖಿಲ ಭಾರತ ರತ್ನ ಹಾಗೂ ಆಭರಣ ಉದ್ಯಮದ ಆಂತರಿಕ ಮಂಡಳಿ (ಜಿಜೆಸಿ) ಶುಕ್ರವಾರ ತಿಳಿಸಿದೆ.
ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುವಿಕೆಯನ್ನು ಮೊದಲನೆ ಹಂತದಲ್ಲಿ 28 ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ 256 ಜಿಲ್ಲೆಗಳನ್ನು ಸರಕಾರವು ಗುರುತಿಸಿದೆ.
ಹಾಲ್ ಮಾರ್ಕ್ ವಿಶಿಷ್ಟ ಗುರುತು ಸಂಖ್ಯೆ (ಎಚ್ಯುಐಡಿ)ಯ ಮುದ್ರಿಸುವಿಕೆಯ ಪ್ರಕ್ರಿಯೆಯು ಮಾರಾಟಕ್ಕಿಡುವ ಆಭರಣಗಳ ಕಟ್ಟಿಂಗ್, ಕರಗಿಸುವಿಕೆ ಹಾಗೂ ಸ್ಕ್ರಾಪಿಂಗ್ (ಕೆರೆಯುವಿಕೆ) ಅನ್ನು ಒಳಗೊಂಡಿರುತ್ತದೆ. ಹೀಗಾಗಿ ಜ್ಯುವೆಲ್ಲರಿಗೆ ಹಾನಿಯಾದಲ್ಲಿ ಹಾಲ್ ಮಾರ್ಕಿಂಗ್ ಪ್ರಕ್ರಿಯೆಯ ಇಡೀ ಪ್ರಕ್ರಿಯೆ ವಿಫಲವಾಗುತ್ತದೆ ಎಂದು ಮುಂಬೈ ಸಗಟು ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಕಾಗ್ರೆಚಾ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಪ್ರಕ್ರಿಯೆಯು ಗ್ರಾಹಕ ಸ್ನೇಹಿ ಸೇವೆಗಳ ಪ್ರಕ್ರಿಯೆಯನ್ನು ಕೂಡಾ ತೆಗೆದುಹಾಕುತ್ತದೆ. ನೂತನ ನಿಯಮಗಳ ಪ್ರಕಾರ ಆಭರಣಗಳ ಮೇಲೆ ಆಭರಣ ವ್ಯಾಪಾರಿ ಸಂಸ್ಥೆಗಳ ಹೆಸರನ್ನು ತೆಗೆದುಹಾಕುವುದು ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಿಂದಲೂ ಪ್ರತಿಕೂಲಕರವಾಗಿದೆ. ಇದರಿಂದಾಗಿ ಚಿನ್ನಾಭರಣಗಳನ್ನು ಗ್ರಾಹಕರು ಮಾರಾಟ ಮಾಡುವಾಗ ಅಥವಾ ವಿನಿಮಯಗೊಳಿಸಲು ಬಯಸುವಾಗ ಸಮಸ್ಯೆಗಳುಂಟಾಗುತ್ತವೆಂದು ಕಾಗ್ರೆಚಾ ಹೇಳಿದ್ದಾರೆ.







