ದೇಶದಲ್ಲಿ 12 ವರ್ಷ ಮೇಲ್ಪಟ್ಟವರ ಕೋವಿಡ್ ಲಸಿಕೆಗೆ ಅನುಮತಿ

ಬೆಂಗಳೂರು, ಆ.21: ದೇಶದಲ್ಲಿ 12 ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ನೀಡಲು ಝೈದೂಸ್ ಕ್ಯಾಡೆಲ್ಲಾ ಅಭಿವೃದ್ಧಿಪಡಿಸಿರುವ ಮೂರು ಡೋಸ್‌ಗಳ ಕೋವಿಡ್-19 ಡಿಎನ್‌ಎ ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಇದು ಭಾರತದಲ್ಲಿ ಬಳಕೆಗೆ ಅನುಮತಿ ಪಡೆದ ಆರನೇ ಲಸಿಕೆಯಾಗಿದೆ.
ವರ್ಷಕ್ಕೆ 100 ರಿಂದ 120 ದಶಲಕ್ಷ ಡೋಸ್ ಝೈಕೋವ್-ಡಿ ಲಸಿಕೆಯನ್ನು ಉತ್ಪಾದಿಸಲು ಕಂಪನಿ ಉದ್ದೇಶಿಸಿದ್ದು, ಈಗಾಗಲೇ ಲಸಿಕೆ ದಾಸ್ತಾನು ಆರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.
ಜೆನರಿಕ್ ಔಷಧ ತಯಾರಿಕಾ ಸಂಸ್ಥೆಯಾಗಿ ಕ್ಯಾಡಿಲ್ಲಾ ಹೆಲ್ತ್‌ಕೇರ್ ಲಿಮಿಟೆಡ್, ಝೈಕೋವ್-ಡಿ ಬಳಕೆಗೆ ಅನುಮತಿ ನೀಡುವಂತೆ ಕೋರಿ ಕಳೆದ ಜುಲೈ 1ರಂದು ಅರ್ಜಿ ಸಲ್ಲಿಸಿತ್ತು. ದೇಶಾದ್ಯಂತ 28 ಸಾವಿರ ಸ್ವಯಂಸೇವಕರ ಮೇಲೆ ನಡೆದ ಕೊನೆಯ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿ 66.6ರಷ್ಟು ಕ್ಷಮತೆ ದೃಢಪಟ್ಟ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಝೈಕೋವ್-ಡಿ ಕೊರೋನ ವೈರಸ್ ವಿರುದ್ಧ ವಿಶ್ವದ ಮೊಟ್ಟಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯಾಗಿದೆ. ವೈರಸ್‌ನ ವಂಶವಾಹಿ ಸಾಧನದಿಂದ ಒಂದು ಭಾಗವನ್ನು ಬಳಸಿಕೊಳ್ಳಲಿದೆ. ಇದು ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ಗುರುತಿಸಬಲ್ಲ ಮತ್ತು ಸ್ಪಂದಿಸಬಲ್ಲ ನಿರ್ದಿಷ್ಟ ಪ್ರೊಟೀನನ್ನು ಉತ್ಪಾದಿಸಲು ಡಿಎನ್‌ಎ ಅಥವಾ ಆರ್‌ಎನ್‌ಎ ರೂಪದ ಸೂಚನೆಯನ್ನು ನೀಡುತ್ತದೆ.
ಝೈದೂಸ್ ಕ್ಯಾಡಿಲ್ಲಾ ಲಸಿಕೆ, ಭಾರತದ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯಾಗಿದ್ದು, ತುರ್ತು ಬಳಕೆಗೆ ಅನುಮತಿ ಪಡೆದ ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡನೇ ಲಸಿಕೆಯಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಈಗಾಗಲೇ ಅನುಮತಿ ಪಡೆದಿದೆ. ಈ ಲಸಿಕೆ ಡೆಲ್ಟಾ ಪ್ರಬೇಧಗಳ ಮೇಲೂ ಅತ್ಯಂತ ಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ. ಸಾಂಪ್ರದಾಯಿಕ ಸಿರಿಂಜ್‌ಗಳ ಬದಲಾಗಿ, ಸೂಜಿಮುಕ್ತ ಅನ್ವಯಿಕೆ ಸಾಧನದ ಮೂಲಕ ಈ ಲಸಿಕೆ ನೀಡಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.







