ಜೈಲಿನಿಂದ ಬಿಡುಗಡೆಗೊಂಡ ಬೆನ್ನಲ್ಲೇ ವಿನಯ್ ಕುಲಕರ್ಣಿ ವಿರುದ್ಧ 2 ಕೇಸು ದಾಖಲು!

ಬೆಳಗಾವಿ, ಆ.21: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆಗೊಂಡಿದ್ದು, ಇದರ ಬೆನ್ನಲ್ಲೇ ಅವರ ವಿರುದ್ಧ ಎರಡು ಕೇಸು ದಾಖಲಾಗಿರುವುದು ವರದಿಯಾಗಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ವಿನಯ್ ಕುಲಕರ್ಣಿ ಹಾಗೂ ಅವರ 300 ಬೆಂಬಲಿಗರ ಮೇಲೆ ಬೆಳಗಾವಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಕೊಂಡಿದ್ದಾರೆ. ಇದಲ್ಲದೆ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ವಿನಯ್ ಕುಲಕರ್ಣಿ ವಿರುದ್ಧ ಹಿಂಡಲಗಾ ಗ್ರಾಮ ಪಂಚಾಯತ್ ಪಿಡಿಒ ಕೂಡಾ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಹಿಂಡಲಗಾ ಜೈಲಿನ ಮುಂಭಾಗದಲ್ಲಿ ಸಾವಿರದಷ್ಟು ಬೆಂಬಲಿಗರು ಜಮಾಯಿಸಿ ಜೈಲಿನಿಂದ ಹೊರಬರುತ್ತಿದ್ದಂತೆ ವಿನಯ್ ಅವರನ್ನು ಸ್ವಾಗತಿಸಿದರು. ಬೃಹತ್ ಸೇಬುಹಣ್ಣಿನ ಹಾರ, ಹೂವಿನ ಹಾರಗಳೊಂದಿಗೆ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು. ಈ ವೇಳೆ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರವಿಲ್ಲದೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಸಹಿತ ಅವರ 300 ಬೆಂಬಲಿಗರ ವಿರುದ್ಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.







