ಪುತ್ತೂರು: ಡಾ.ಆಯಿಷಾ ನಿಶಾದ್‌ಗೆ ಸನ್ಮಾನ

ಪುತ್ತೂರು, ಆ.21: ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಅಂತಿಮ ಪರೀಕ್ಷೆಯಲ್ಲಿ ಕಾಲೇಜಿಗೆ ಟಾಪರ್ ಆಗಿ ಅತ್ಯುತ್ತಮ ಶ್ರೇಣಿಯಲ್ಲಿ ವೈದ್ಯಕೀಯ ಪದವಿ ಪಡೆದಿರುವ ತಾಲೂಕಿನ ಮುರ ನಿವಾಸಿ ಡಾ.ಆಯಿಷಾ ನಿಶಾದ್‌ರನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷವಾಗಿ ಪುತ್ತೂರು ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ವೃತ್ತಿ ಮಾಡುತ್ತಿರುವ ಮುಸ್ಲಿಂ ಸಾಧಕಿಯರಿಂದಲೇ ಡಾ.ನಿಶಾದ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುತ್ತೂರಿನ ಸುಧಾನಾ ಶಾಲಾಡಳಿತ ಮಂಡಳಿಯ ಸದಸ್ಯ ಆಸ್ಕರ್ ಆನಂದ್ ಉಪಸ್ಥಿತಿಯಲ್ಲಿ ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಹೈಲಾ, ಕಲ್ಲಡ್ಕದ ದಂತ ವೈದ್ಯೆ ಡಾ.ಮುಫೀದಾ, ಅಡ್ವಕೇಟ್ ಝುಬೈದಾ ಸರಳೀಕಟ್ಟೆ ಹಾಗೂ ಅಡ್ವಕೇಟ್ ರಮ್ಲತ್ ಅವರು ಡಾ.ಆಯಿಷಾ ನಿಶಾದ್‌ರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನಿಶಾದ್, ತನ್ನನ್ನು ಸನ್ಮಾನಿಸಿದ ಸಾಧಕಿ ಮುಸ್ಲಿಂ ಯುವತಿಯರ ಕಥೆ ಕೇಳಿದಾಗ ನನ್ನ ಸಾಧನೆ ಸಣ್ಣದು ಎನಿಸುತ್ತದೆ. ನನಗೆ ಹೆತ್ತವರ ಸಹಕಾರ, ಆರ್ಥಿಕ ಸಾಮರ್ಥ್ಯ ಇತ್ತು. ಹೀಗಾಗಿ ನನ್ನ ಕಲಿಕೆಗೆ ಯಾವುದೇ ಅಡ್ಡಿ, ಆತಂಕ ಇರಲಿಲ್ಲ. ಆದರೆ, ನನಗೆ ಸನ್ಮಾನಿಸಿದ ಯುವತಿಯರ ಬದುಕಿನಲ್ಲಿ, ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗುವ ಕಥೆಗಳಿವೆ ಎಂದರು.
ಇದೇವೇಳೆ ಡಾ.ಆಯಿಷಾ ನಿಶಾದ್‌ರ ತಂದೆ ಎಂ.ಪಿ. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ, ನೋಟರಿ ಎಂ.ಪಿ.ಅಬೂಬಕರ್‌ರನ್ನೂ ಸನ್ಮಾನಿಸಲಾಯಿತು.
ಕಮ್ಯೂನಿಟಿ ಸೆಂಟರ್ ಮುಖ್ಯಸ್ಥ ಹನೀಫ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಇಮ್ತಿಯಾಝ್ ಪಾರ್ಲೆ, ನಝೀರ್, ನವಾಝ್, ಕೆ.ಪಿ.ಅಮೀನ್, ಮುಝಮ್ಮಿಲ್ ಉಪಸ್ಥಿತರಿದ್ದರು.









