ದುಷ್ಕರ್ಮಿಗಳಿಂದ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಜಾರ್ಖಂಡ್ ನಲ್ಲಿ ಆಘಾತಕಾರಿ ಘಟನೆ

ದುಮ್ಕಾ, ಆ.21:ವಿವಾಹಿತನೊಂದಿಗೆ ಆಕ್ರಮ ಸಂಬಂಧವಿರುವುದಾಗಿ ಆರೋಪಿಸಿ ಮಹಿಳೆಯೊಬ್ಬಳನ್ನು ಗುಂಪೊಂದು ವಿವಸ್ತ್ರಗೊಳಿಸಿ, ಆಕೆಗೆ ಪಾದರಕ್ಷೆಗಳ ಹಾರ ತೊಡಿಸಿ ಬೆತ್ತಲೆ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಜಾರ್ಖಂಡ್ ನ ಧುಮ್ಕಾ ಜಿಲ್ಲೆಯಲ್ಲಿ ನಡೆದಿದೆಯೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜಿಲ್ಲೆಯ ರಾಣೀಶ್ವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ವಿವಾಹಿತೆಯಾದ ಈ ಮಹಿಳೆಯು ಇನ್ನೋರ್ವ ಪುರುಷನೊಂದಿಗೆ ಊರು ಬಿಟ್ಟು ಪಲಾಯನ ಮಾಡಿದ್ದಳು. ಆದರೆ ಬುಧವಾರ ರಾತ್ರಿ ಆಕೆಯನ್ನು ಪ್ರಿಯಕರನ ಪತ್ನಿಯ ಸಂಬಂಧಿಕರು ಪತ್ತೆಹಚ್ಚಿ ಹಿಡಿದಿದ್ದರು ಹಾಗೂ ಹಿಗ್ಗಾಮಗ್ಗಾ ಥಳಿಸಿದ್ದರು.
ಆನಂತರ ಆಕೆಯನ್ನು ವಿವಸ್ತ್ರಗೊಳಿಸಿ ಚಪ್ಪಲಿಹಾರ ತೊಡಿಸಿ ಗ್ರಾಮದುದ್ದಕ್ಕೂ ನಗ್ನ ವಾಗಿ ಮೆರವಣಿಗೆ ಮಾಡಲಾಗಿತ್ತು ಎಂದು ಪೊಲೀಸ್ಅಧಿಕಾರಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಗುರುವಾರ ಎಫ್ಐಆರ್ ದಾಖಲಾಗಿದ್ದು 12 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಅವರಲ್ಲಿ ಪ್ರಿಯಕರ ಹಾಗೂ ಆತನ ಪತ್ನಿ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ತನ್ನಿಂದ 25 ಸಾವಿರ ರೂ.ಗಳನ್ನು ಕಿತ್ತುಕೊಂಡಿರುವುದಾಗಿ ಹಲ್ಲೆಗೀಡಾದ ಯುವತಿ ಆರೋಪಿಸಿದ್ದಾರೆ. ಭಾರತೀಯ ದಂಡಸಂಹಿತೆಯ 148 (ಗಲಭೆ) ಹಾಗೂ ( ಶಾಂತಿ ಭಂಗದ ಜೊತೆ ಉದ್ದೇಶಪೂರ್ವಕವಾಗಿ ಅಪಮಾನಿಸುವುದು),506 (ಕ್ರಿಮಿನಲ್ ಬೆದರಿಕೆ), 354 ಬಿ (ಹಲ್ಲೆ) ಹಾಗೂ 379 (ಕಳವು) ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಉಳಿದ ಆರು ಮಂದಿ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿರುವುದಾಗಿಯೂ ಅವರು ಹೇಳಿದ್ದಾರೆ.







