ಭಯೋತ್ಪಾದನಾ ಚಟುವಟಿಕೆಗಳ ಮೂಲಕ ತಾಲಿಬಾನ್ ಇಸ್ಲಾಂ ಧರ್ಮದ ಹೆಸರು ಕೆಡಿಸುತ್ತಿದೆ: ಅಜ್ಮೀರ್ ದರ್ಗಾ ಮುಖ್ಯಸ್ಥ

Photo: Facebook
ತಾಲಿಬಾನ್ ಸಂಘಟನೆಯು "ಶರಿಯತ್" ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಇಸ್ಲಾಂ ಧರ್ಮದ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ಅಜ್ಮೀರ್ ದರ್ಗಾದ ಧಾರ್ಮಿಕ ಮುಖ್ಯಸ್ಥ ಸೈಯದ್ ಝೈನುಲ್ ಆಬಿದೀನ್ ರವರು ಹೇಳಿದ್ದಾರೆ. ಇಸ್ಲಾಮಿಕ್ ಕಾನೂನಿನ ಹೆಸರಿನಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತು ಹತ್ಯೆಗಳನ್ನು ಬೆಂಬಲಿಸಲು ಸಾಧ್ಯವಿಲ್ಲ ಮತ್ತು ಇವುಗಳು ಇಸ್ಲಾಂನಲ್ಲಿ ಅಪರಾಧವಾಗಿದೆ ಎಂದು ಅವರು ಹೇಳಿದರು.
ತಾಲಿಬಾನಿಗಳ ಭಯೋತ್ಪಾದನೆ ಮತ್ತು ಸರ್ವಾಧಿಕಾರಿ ಚಟುವಟಿಕೆಗಳು ಜಗತ್ತಿನಲ್ಲಿ ಇಸ್ಲಾಂ ಧರ್ಮದ ವಿರುದ್ಧ ದ್ವೇಷವನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ ಅವರು, "ತಾಲಿಬಾನ್ ಶರಿಯತ್ (ಇಸ್ಲಾಮಿಕ್ ಕಾನೂನು) ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದ ಇಸ್ಲಾಂ ಧರ್ಮವನ್ನು ಹಾಳುಗೆಡವುತ್ತಿದೆ" ಎಂದು ಆಬಿದೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನವು ಕ್ರೂರ ತಾಲಿಬಾನ್ ಕೈಗೆ ಸಿಲುಕಿದೆ ಮತ್ತು ಈ ದೇಶದಲ್ಲಿ ವಿನಾಶದ ನೀತಿ ನಿಯಮಗಳು, ಮಹಿಳೆಯರ ಮೇಲೆ ನಿರ್ಬಂಧಗಳು ಮತ್ತು ಹತ್ಯೆಗಳು ಆರಂಭವಾಗಿವೆ ಎಂದು ಅವರು ಹೇಳಿದರು.
"ಶರಿಯತ್" ಹೆಸರಿನಲ್ಲಿ ಇಂತಹ ಕೃತ್ಯಗಳು ಇಸ್ಲಾಂನಲ್ಲಿ ಅಪರಾಧವಾಗಿದೆ ಮತ್ತು ಅದನ್ನು ಬೆಂಬಲಿಸಲು ಸಾಧ್ಯವಿಲ್ಲ, ತಾಲಿಬಾನ್ ತನ್ನ ಅಜೆಂಡಾದ ಪ್ರಕಾರ ಭಯೋತ್ಪಾದನೆ ಮತ್ತು ಆಡಳಿತದ ಕಾರ್ಯಸೂಚಿಯನ್ನು ಪೂರೈಸಲು ಶರೀಯತ್ ಕಾನೂನನ್ನು ವಿಭಿನ್ನವಾಗಿ ಅರ್ಥೈಸಿದೆ ಎಂದು ಅವರು ಹೇಳಿದರು.
ಜನರು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ನಮ್ಮ ದೇಶವನ್ನು ಉಳಿಸುವುದು, ಏಕತೆ ಮತ್ತು ಶಾಂತಿಯನ್ನು ಕಾಪಾಡುವುದು ನಮ್ಮ ಮೊದಲ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು. "ತಾಲಿಬಾನ್ ಮತ್ತು ಅವರ ಭಯೋತ್ಪಾದಕ ಸಿದ್ಧಾಂತದ ಕಾನೂನುಬಾಹಿರ ಅಧಿಕಾರವನ್ನು ಬೆಂಬಲಿಸುವ ಮತ್ತು ಸ್ವಾಗತಿಸುವವರನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಅವರು ಹೇಳಿದರು.
"ಭಾರತದ ಮುಸ್ಲಿಮರು ಶಾಂತಿಯನ್ನು ಬಯಸುವ ಪ್ರಜೆಗಳಾಗಿರುವುದರಿಂದ, ಇಸ್ಲಾಂನ ಮೂಲ ಬೋಧನೆಗಳಿಗೆ ವಿರುದ್ಧವಾದ ತಾಲಿಬಾನ್ ಸಿದ್ಧಾಂತವನ್ನು ಬೆಂಬಲಿಸುವುದಿಲ್ಲ ಮತ್ತು ಅದನ್ನು ಸ್ವಾಗತಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.







