ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನ

ಹೊಸದಿಲ್ಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಶನಿವಾರ ನಿಧನರಾದರು ಎಂದು NDTV ವರದಿ ಮಾಡಿದೆ.
ರಾಜಸ್ಥಾನ ಮಾಜಿ ರಾಜ್ಯಪಾಲರಾಗಿದ್ದ ಸಿಂಗ್ ಅವರಿಗೆ 89 ವರ್ಷ ವಯಸ್ಸಾಗಿತ್ತು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಬಿಜೆಪಿ ನಾಯಕ ಜುಲೈ 4 ರಿಂದ ರಾಷ್ಟ್ರ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದಕ್ಕೂ ಮುನ್ನ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಿಂಗ್ ಅವರು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಜೂನ್ 1991 ರಿಂದ ಡಿಸೆಂಬರ್ 1992 ತನಕ ಹಾಗೂ ಸೆಪ್ಟೆಂಬರ್ 1997 ರಿಂದ ನವೆಂಬರ್ 1999 ರವರೆಗೆ ಮುಖ್ಯಮಂತ್ರಿಯಾಗಿದ್ದರು.
ಕಲ್ಯಾಣ್ ಸಿಂಗ್ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ 1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಘಟನೆಯು ದೇಶಾದ್ಯಂತ ಆಘಾತದ ಅಲೆ ಎಬ್ಬಿಸಿತ್ತು. ಮಸೀದಿ ಧ್ವಂಸಗೊಂಡ ನಂತರ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಹಾಗೂ ಅಂದಿನ ಪ್ರಧಾನಿ ನರಸಿಂಹರಾವ್ ನೇತೃತ್ವದ ಕೇಂದ್ರ ಸರಕಾರವು ಅದೇ ದಿನ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಿತ್ತು.
ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯ ಅತ್ರೌಲಿ ಪಟ್ಟಣದಲ್ಲಿ ಜನಿಸಿದ ಸಿಂಗ್ ಅವರು 1967 ರಲ್ಲಿ ಮೊದಲ ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು.







