ಕಾಬೂಲ್ ಏರ್ಲಿಫ್ಟ್ ಕಾರ್ಯಾಚರಣೆ ಇತಿಹಾಸದಲ್ಲೇ ಅತ್ಯಂತ ಸವಾಲಿನ ಪ್ರಕ್ರಿಯೆ: ಬೈಡನ್

ವಾಷಿಂಗ್ಟನ್, ಆ.21: ಅಫ್ಘಾನ್ ನಲ್ಲಿ ತಾಲಿಬಾನ್ ಗಳ ಕೈ ಮೇಲಾಗುತ್ತಿದ್ದಂತೆಯೇ ಅಲ್ಲಿ ಸಿಲುಕಿಕೊಂಡು ಅತಂತ್ರರಾಗಿದ್ದವರನ್ನು ವಿಮಾನದ ಮೂಲಕ ತೆರವುಗೊಳಿಸಿದ ಕಾರ್ಯಾಚರಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಸವಾಲಿನ ಪ್ರಕ್ರಿಯೆಯಾಗಿ ದಾಖಲಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಅಂತಿಮ ಫಲಿತಾಂಶದ ಬಗ್ಗೆ ಅಥವಾ ಈ ಕಾರ್ಯಾಚರಣೆ ವೇಳೆ ಪ್ರಾಣನಷ್ಟದ ಅಪಾಯ ಎದುರಾಗದು ಎಂದು ನಾನು ಭರವಸೆ ನೀಡಲಾರೆ. ಆದರೆ ಎಲ್ಲಾ ಸಂಪನ್ಮೂಲಗಳನ್ನೂ ಒಗ್ಗೂಡಿಸಿ ಸಮಗ್ರ ಕಾರ್ಯಾಚರಣೆ ನಡೆಸುವುದಾಗಿ ಮುಖ್ಯ ಕಮಾಂಡರ್ ಆಗಿ ನಿಮಗೆ ಭರವಸೆ ನೀಡಬಲ್ಲೆ ’ ಎಂದು ಬೈಡನ್ ಹೇಳಿದ್ದಾರೆ. ತಾಲಿಬಾನ್ ಗಳಿಂದ ಸುತ್ತುವರಿದಿದ್ದ ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಜನರನ್ನು ತೆರವುಗೊಳಿಸಿದ ಕಾರ್ಯಾಚರಣೆಯಲ್ಲಿದ್ದ ಅಪಾಯದ ಬಗ್ಗೆ ಅವರು ಶ್ವೇತಭವನದಿಂದ ನೇರಪ್ರಸಾರವಾದ ಟಿವಿ ಕಾರ್ಯಕ್ರಮದಲ್ಲಿ ವಿವರಣೆ ನೀಡಿದರು.
ಸ್ವದೇಶಕ್ಕೆ ವಾಪಸಾಗಲು ಬಯಸುವ ಯಾವುದೇ ಅಮೆರಿಕನ್ನರನ್ನು ಇಲ್ಲಿಗೆ ಕರೆತರುವ ಹೊಣೆ ನಮ್ಮದು ಎಂಬ ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ. ಜುಲೈಯಿಂದ 18,000 ಅಮೆರಿಕನ್ನರನ್ನು (ಇದರಲ್ಲಿ 13,000 ಮಂದಿಯನ್ನು ಆಗಸ್ಟ್ನಲ್ಲೇ) ಅಮೆರಿಕದ ಪಡೆಗಳು ಅಫ್ಗಾನ್ನಿಂದ ತೆರವುಗೊಳಿಸಿವೆ. ಅಮೆರಿಕ ಸರಕಾರ ಒದಗಿಸಿದ ಖಾಸಗಿ ಬಾಡಿಗೆ ವಿಮಾನದಲ್ಲಿ ಇನ್ನೂ ಹಲವು ಸಾವಿರ ಜನರನ್ನು ಸ್ಥಳಾಂತರಿಲಾಗಿದೆ ಎಂದು ಬೈಡನ್ ಹೇಳಿದರು.
ಅಫ್ಘಾನ್ ನಿಂದ ಅಮೆರಿಕ ಪಡೆಗಳ ವಾಪಸಾತಿ ಬಗ್ಗೆ ಘೋಷಿಸಿದ ಸಂದರ್ಭ, ಅಲ್ಲಿರುವ ಅಮೆರಿಕನ್ನರನ್ನು ಆಗಸ್ಟ್ 31ರೊಳಗೆ ಸಂಪೂರ್ಣ ತೆರವುಗೊಳಿಸುವ ಯೋಜನೆಯಿದೆ ಎಂದು ಬೈಡನ್ ಹೇಳಿದ್ದರು. ಈ ಹೇಳಿಕೆ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದ ಅವರು, ಗಡುವಿನೊಳಗೆ ತೆರವು ಕಾರ್ಯಾಚರಣೆ ಮುಗಿಸುವ ಭರವಸೆಯಿದೆ. ತೆರವು ಕಾರ್ಯಾಚರಣೆಗೆ ನೆರವು ಮತ್ತು ವ್ಯವಸ್ಥೆ ಒದಗಿಸುವ ಬಗ್ಗೆ ತಾಲಿಬಾನ್ಗಳೊಂದಿಗೆ ನಿರಂತ ಸಂಪರ್ಕದಲ್ಲಿದ್ದೇವೆ ಎಂದಿದ್ದರು.







