ಬೆಂಗಳೂರು: 11 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಆಫ್ರಿಕಾ ಪ್ರಜೆಯ ಬಂಧನ

ಬೆಂಗಳೂರು, ಆ.21: ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪ ಸಂಬಂಧ ವಿದೇಶಿ ಪ್ರಜೆವೋರ್ವನನ್ನು ಬಂಧಿಸಿರುವ ಬೆಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಒಟ್ಟು 11 ಕೋಟಿ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದಾರೆ.
ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಆಫ್ರಿಕಾ ಮೂಲದ ಪ್ರಜೆ ಎಂದು ಗುರುತಿಸಲಾಗಿದೆ.
ವಿದೇಶದಿಂದ ಭಾರತಕ್ಕೆ ಕೊಕೇನ್ ಸಾಗಾಟ ಮಾಡುತ್ತಿರುವ ಸುಳಿವೊಂದು ಡಿಆರ್‍ಐಗೆ ಲಭಿಸಿತ್ತು. ಹೀಗಾಗಿ ಪಶ್ಚಿಮ ಏಷ್ಯಾದಿಂದ ಬಂದ ವಿಮಾನದಲ್ಲಿ ಪ್ರಯಾಣಿಕರ ವಿವರಗಳನ್ನು ಪಡೆದು ಪರಿಶೀಲಿಸಲಾಗಿತ್ತು. ಇದೇ ವೇಳೆ ಮೂತ್ರಪಿಂಡದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿರುವುದಾಗಿ 30 ವರ್ಷದ ವ್ಯಕ್ತಿಯೊಬ್ಬ ವೈದ್ಯಕೀಯ ಉದ್ದೇಶಗಳಿಗಾಗಿ ವೀಸಾ ಪಡೆದಿದ್ದ ಎನ್ನಲಾಗಿದೆ.
ಆತನನ್ನು ತಡೆದು ವಿಚಾರಣೆ ನಡೆಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತನ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆಗಳಿರುವುದು ಕಂಡು ಬಂದಿದೆ ಎಂದು ಡಿಆರ್‍ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯಿಂದ ಒಟ್ಟು 1.3 ಕೆ.ಜಿ ಕೊಕೇನ್ ಮಾತ್ರೆಗಳನ್ನು ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ 11 ಕೋಟಿ ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.





