ಮಲೇಶ್ಯಾದ ನೂತನ ಪ್ರಧಾನಿಯಾಗಿ ಇಸ್ಮಾಯಿಲ್ ಯಾಕೂಬ್ ಪ್ರಮಾಣಚನ

ಕೌಲಲಾಂಪುರ, ಆ.21: ಮಾಜಿ ಉಪಪ್ರಧಾನಿ, ಯುನೈಟೆಡ್ ಮಲಯಾಸ್ ನ್ಯಾಷನಲ್ ಆರ್ಗನೈಸೇಷನ್(ಯುಎಂಎನ್ಒ) ಮುಖಂಡ ಇಸ್ಮಾಯಿಲ್ ಸಬ್ರಿ ಯಾಕೂಬ್ ಮಲೇಶ್ಯಾದ ನೂತನ ಪ್ರಧಾನಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾಂಪ್ರದಾಯಕ ಮಲೇಶ್ಯಾ ದಿರಿಸು ತೊಟ್ಟಿದ್ದ 61 ವರ್ಷದ ಯಾಕೂಬ್ ಪ್ರಧಾನಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕರಿಸಿದರು. ಮಲೇಶ್ಯಾದ ದೊರೆ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮ್ ಶಾ ಈ ಸಂದರ್ಭ ಉಪಸ್ಥಿತರಿದ್ದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದೊರೆ , ಕೊರೋನ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದ ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ರಾಜಕೀಯ ವೈರತ್ವ ಮರೆತು ದೇಶದ ಹಿತದೃಷ್ಟಿಯಿಂದ ಒಗ್ಗೂಡಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು ಎಂು ಮಾಧ್ಯಮಗಳು ವರದಿ ಮಾಡಿವೆ.
ನೂತನ ಪ್ರಧಾನಿಯ ನೇಮಕದೊಂದಿಗೆ ದೇಶದಲ್ಲಿ ತಲೆದೋರಿದ್ದ ರಾಜಕೀಯ ಅಸ್ಥಿರತೆ ಕ್ಷಿಪ್ರವಾಗಿ ದೂರವಾಗಲಿದೆ ಎಂದು ದೊರೆ ಆಶಿಸುವುದಾಗಿ ರಾಜಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಪ್ರಧಾನಿ ಹುದ್ದೆಗೆ ಪ್ರಬಲ ಹಕ್ಕು ಮಂಡಿಸಿದ್ದ ವಿಪಕ್ಷ ಮುಖಂಡ ಅನ್ವರ್ ಇಬ್ರಾಹಿಂ, ಹೊಸ ಸವಾಲನ್ನು ಸ್ವೀಕರಿಸಿ ಮುಂದಿನ ಚುನಾವಣೆಗೆ ಕಠಿಣ ಪರಿಶ್ರಮ ನಡೆಸಿ ಸಿದ್ಧವಾಗಿರುವಂತೆ ವಿಪಕ್ಷಗಳ ಮೈತ್ರಿಕೂಟಕ್ಕೆ ಕರೆ ನೀಡಿದ್ದಾರೆ.
2018ರ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು. ಆದರೆ ಮೈತ್ರಿಕೂಟದ ಪಕ್ಷದೊಳಗಿನ ಭಿನ್ನಮತ ತಾರಕಕ್ಕೇರಿ ಸರಕಾರ ಪತನವಾಗಿತ್ತು. ಬಳಿಕ ಮುಹಿಯುದ್ದೀನ್ ಯಾಸಿನ್ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದರು. ಈ ಮೈತ್ರಿಕೂಟದಲ್ಲಿ ಯುಎಂಎನ್ಒ ಕೂಡಾ ಸೇರಿತ್ತು. ಇವರೂ ಕೂಡಾ ಪಕ್ಷದೊಳಗಿನ ಭಿನ್ನಮತದಿಂದಾಗಿ ಬಹುಮತ ಕಳೆದುಕೊಂಡು ರಾಜೀನಾಮೆ ನೀಡಬೇಕಾಯಿತು. 1957ರಲ್ಲಿ ಬ್ರಿಟನ್ನಿಂದ ಸ್ವತಂತ್ರಗೊಂಡಂದಿನಿಂದ ನಿರಂತರ ಆಡಳಿತದಲ್ಲಿದ್ದ ಯುಎಮ್ಎನ್ಒ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದು 2018ರ ಚುನಾವಣೆಯಲ್ಲಿ ಆಘಾತಕಾರಿ ಸೋಲುಂಡಿತ್ತು.
ಇದೀಗ, ಚುನಾವಣೆ ಎದುರಿಸದೆಯೇ ಮತ್ತೆ ಸರಕಾರ ರಚಿಸುವ ಅವಕಾಶ ಯುಎಮ್ಎನ್ಒಗೆ ಸಿಕ್ಕಿದೆ. 4 ವರ್ಷದೊಳಗೆ 3ನೇ ಪ್ರಧಾನಿಯನ್ನು ಕಂಡಿರುವ ಮಲೇಶ್ಯಾದ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದರೆ ಇಸ್ಮಾಯಿಲ್ ಸಬ್ರಿ ನಿರ್ಗಮಿತ ಪ್ರಾಧನಿ ಯಾಸಿನ್ ಪಕ್ಷವನ್ನು ಅವಲಂಬಿಸಬೇಕಾಗಿದೆ. ಈ ಮಧ್ಯೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಯುಎಮ್ಎನ್ಒಗೆ ಮತ್ತೆ ಸರಕಾರ ರಚಿಸಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸಹಿಸಂಗ್ರಹ ಅಭಿಯಾನ ಆರಂಭವಾಗಿದ್ದು ನೂತನ ಸರಕಾರದ ಸ್ಥಿರತೆಯ ಬಗ್ಗೆ ಶಂಕೆಗೆ ಕಾರಣವಾಗಿದೆ ಎಂದು ಾಧ್ಯಮಗಳು ವರದಿ ಮಾಡಿವೆ.