ಆಸ್ಟ್ರೇಲಿಯಾ: ಲಾಕ್ಡೌನ್ ವಿರುದ್ಧ ಪ್ರತಿಭಟನೆ; 250ಕ್ಕೂ ಅಧಿಕ ಜನರ ಬಂಧನ

photo :PTI
ಸಿಡ್ನಿ, ಆ.21: ಆಸ್ಟ್ರೇಲಿಯಾದಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ 250ಕ್ಕೂ ಅಧಿಕ ಜನರನ್ನು ಶನಿವಾರ ಬಂಧಿಸಲಾಗಿದೆ. ಲಾಕ್ಡೌನ್ ನಿಯಮ ಉಲ್ಲಂಸಿದ ಕಾರಣ ಇವರಲ್ಲಿ ಹಲವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ದೇಶದ ಹಲವು ನಗರಗಳಲ್ಲಿ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಮೆಣಸಿನ ಪುಡಿ ಎರಚಲಾಗಿದೆ.
ಮೆಲ್ಬೋರ್ನ್ನಲ್ಲಿ ಬೃಹತ್ ಮತ್ತು ಹಿಂಸಾತ್ಮಕ ರೀತಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಘರ್ಷಣೆಯಲ್ಲಿ ಕನಿಷ್ಟ 7 ಪೊಲೀಸರು ಗಾಯಗೊಂಡಿದ್ದಾರೆ. ಆನ್ಲೈನ್ ವೇದಿಕೆಯ ಮೂಲಕ ಈ ಪ್ರತಿಭಟನೆಯನ್ನು ಸಂಯೋಜಿಸಲಾಗಿದೆ . ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೆಲ್ಬೋರ್ನ್ನಲ್ಲಿ 4 ಸಾವಿರಕ್ಕೂ ಜನ ಕೊರೋನ ಸೋಂಕಿನ ವಿರುದ್ಧದ ನಿಯಮಾವಳಿ ಮೀರಿ ಪ್ರತಿಭಟನೆಗೆ ಗುಂಪು ಸೇರಿದ್ದರು. ವಿಕ್ಟೋರಿಯಾ ರಾಜ್ಯದಲ್ಲಿ 218 ಮಂದಿಯನ್ನು ಬಂಧಿಸಿದ್ದು 200 ಮಂದಿಗೆ ತಲಾ 3,850 ಡಾಲರ್ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಸಿಡ್ನಿಯಲ್ಲಿ 2 ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದರೆ, ಮೆಲ್ಬೋರ್ನ್ ಮತ್ತು ಕ್ಯಾನ್ಬೆರಾದಲ್ಲಿ ಈ ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ಡೌನ್ ನಿಯಮದಂತೆ ಜನತೆ ಅಗತ್ಯಬಿದ್ದರೆ ಮಾತ್ರ ಮನೆಯಿಂದ ಹೊರಬರಲು ಅವಕಾಶವಿದೆ. ಇಷ್ಟೆಲ್ಲಾ ನಿರ್ಬಂಧವಿದ್ದರೂ ಸಿಡ್ನಿಯ ನ್ಯೂ ಸೌತ್ವೇಲ್ಸ್ ರಾಜ್ಯದಲ್ಲಿ ಶನಿವಾರ ಡೆಲ್ಟಾ ಸೋಂಕಿನ 825 ಹೊಸ ಪ್ರಕರಣ ದಾಖಲಾಗಿದೆ.