ಹಫ್ತಾ ವಸೂಲಿ ಆರೋಪ: ಮುಂಬೈನ ಮಾಜಿ ಪೊಲೀಸ್ ಆಯುಕ್ತರ ವಿರುದ್ಧ ಎಫ್ಐಆರ್
ಮುಂಬೈ,ಆ.21: ಹಫ್ತಾ ವಸೂಲಿ ಆರೋಪದಲ್ಲಿ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರ ವಿರುದ್ಧ ಶುಕ್ರವಾರ ಇಲ್ಲಿಯ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಉದ್ಯಮಿ ಬಿಮಲ್ ಅಗರವಾಲ್ ಅವರು ಸಿಂಗ್ ವಿರುದ್ಧ ದೂರು ಸಲ್ಲಿಸಿದ್ದರು.
ಇದು ಒಂದು ತಿಂಗಳ ಅವಧಿಯಲ್ಲಿ ಸಿಂಗ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ದಾಖಲಿಸಿರುವ ನಾಲ್ಕನೇ ಪ್ರಕರಣವಾಗಿದೆ. ಇತರ ಮೂರು ಪ್ರಕರಣಗಳ ಪೈಕಿ ಒಂದು ಮುಂಬೈನಲ್ಲಿ ಮತ್ತು ಎರಡು ನೆರೆಯ ಥಾಣೆ ಜಿಲ್ಲೆಯಲ್ಲಿ ದಾಖಲಾಗಿವೆ.
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆ ಹಾಗೂ ಸುಮಿತ್ ಸಿಂಗ್ ಅಲಿಯಾಸ್ ಚಿಂಟು,ಅಲ್ಪೇಶ ಪಟೇಲ್,ವಿನಯಸಿಂಗ್ ಅಲಿಯಾಸ್ ಬಬ್ಲೂ ಮತ್ತು ರಿಯಾಝ್ ಭಾಟಿ ಅವರನ್ನೂ ಶುಕ್ರವಾರ ದಾಖಲಾದ ಎಫ್ಐಆರ್ನಲ್ಲಿ ಹೆಸರಿಸಲಾಗಿದೆ.
ಗೋರೆಗಾಂವ್ ಮತ್ತು ಅಂಧೇರಿಗಳಲ್ಲಿ ಹೋಟೆಲ್ ಗಳನ್ನು ಹೊಂದಿರುವ ದೂರುದಾರ ಅಗರವಾಲ್,ಆರೋಪಿಗಳು ತನ್ನಿಂದ ನಗದು ಒಂಭತ್ತು ಲ.ರೂ.ಮತ್ತು 2.92 ಲ.ರೂ.ಮೌಲ್ಯದ ಎರಡು ಮೊಬೈಲ್ ಫೋನ್ ಗಳನ್ನು ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಹೋಟೆಲ್ ಗೆಳಿಗೆ ಸಂಬಂಧಿಸಿದಂತೆ ತನಗೆ ಪೊಲೀಸರು ಕಿರುಕುಳ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದು ಪತ್ತೆಯಾಗಿದ್ದ ಪ್ರಕರಣದಲ್ಲಿ ಕಳೆದ ಮಾರ್ಚ್ನಲ್ಲಿ ವಾಝೆ ಬಂಧನದ ಬಳಿಕ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ತೆಗೆಯಲಾಗಿತ್ತು. ಬಳಿಕ ಸಿಂಗ್ ಅವರು ರಾಜ್ಯದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರು ಮುಂಬೈನ ಬಾರ್ಗಳು,ರೆಸ್ಟೋರಂಟ್ ಗಳು ಮತ್ತು ಹುಕ್ಕಾ ಪಾರ್ಲರ್ಗಳಿಂದ ಹಫ್ತಾ ವಸೂಲು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿರುವುದಾಗಿ ಥಾಣೆ ಪೊಲೀಸರು ಆ.13ರಂದು ತಿಳಿಸಿದ್ದರು.







